'ಬುದ್ಧ ಚರಣ' - ಡಾ. ಎಚ್. ಎಸ್. ವೆಂಕಟೇಶ ಮೂರ್ತಿ !


























'ಶ್ರೀಮತಿ. ರಾಜಲಕ್ಷ್ಮಿ ಮೂರ್ತಿ ಮತ್ತು ಎಚ್ಚೆಸ್ವಿ ಯವರ  ಆನಂದದ ಜೊತೆಫೋಟೋ'  ! (ಗೋಡೆಯ ಮೇಲೆ)
ಡಾ . ಎಚ್. ಎಸ್. ವೆಂಕಟೇಶ ಮೂರ್ತಿಯವರು ತಮ್ಮ ಪ್ರೀತಿಯ ತಾಯಿ ನಾಗರತ್ನಮ್ಮನವರ ಜೊತೆ. ಅವರ ಆಪ್ತ
ಗೆಳೆಯರು  ೧. ಜಿ. ಎಸ್. ಶಂಕರ ನಾರಾಯಣ, ೨. ಎಚ್. ಆರ್. ಎಲ್. ವೆಂಕಟೇಶ, ೩. ಕೆ. ಟಿ. ಶಂಕರನಾರಾಯಣ 

ಅಂತಃಕರಣದ ಕವಿ ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಅವರ ಇಪ್ಪತ್ತು ವರ್ಷಗಳ ಅವಿರತ ತಪಸ್ಸಿನ ಫಲವಾಗಿ ಜನ್ಮತಾಳಿದ ಮಹಾಕಾವ್ಯ ಬುದ್ಧಚರಣ. ಬುದ್ಧನ ಕತೆಯನ್ನು ಕಾವ್ಯದಲ್ಲಿ ಕಟ್ಟಿಕೊಟ್ಟಿರುವ ಎಚ್ಚೆಸ್ವಿಯವರ ಈ ಪುಸ್ತಕ ಇಂದು ವರ್ಚುಯಲ್ ಸಮಾರಂಭದಲ್ಲಿ ಲೋಕಾರ್ಪಣೆ ಆಗುತ್ತಿದೆ. ಕನ್ನಡಿಗರಿಗೆ ಓದಿಗೆ ಸಿಕ್ಕಲಿದೆ.ಅಂಕಿತ ಪುಸ್ತಕ ಹೊರತಂದಿರುವ ಈ ಮಹಾಕಾವ್ಯದ ಹೊತ್ತಿಗೆಯನ್ನು ಬುಕ್ ಬ್ರಹ್ಮ ಫೇಸ್ ಬುಕ್ ಲೈವ್ ನಲ್ಲಿ ಹೆಸರಾಂತ ವಿಮರ್ಶಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಬಿಡುಗಡೆ ಮಾಡಲಿದ್ದಾರೆ. ಕವಿ ಎಚ್. ಎಸ್ ವೆಂಕಟೇಶ ಮೂರ್ತಿ ಮತ್ತು ಎಂ. ಆರ್. ದತ್ತಾತ್ರಿ ಅವರು ನಂತರ ನಡೆಯುವ ಸಂವಾದದಲ್ಲಿ ಭಾಗವಹಿಸಲಿದ್ದಾರೆ.ಈ ಪುಸ್ತಕದ ಒಂದು ಭಾಗವನ್ನು ಕನ್ನಡ ಪ್ರೆಸ್ ಓದುಗರಿಗೆ ಇಲ್ಲಿ ಸಾದರ ಪಡಿಸುತ್ತಿದ್ದೇವೆ.

Courtesy : ಅಂಕಿತ ಪುಸ್ತಕ ಹೊರತಂದಿರುವ ಈ ಮಹಾಕಾವ್ಯದ ಹೊತ್ತಿಗೆಯನ್ನು 'ಬುಕ್ ಬ್ರಹ್ಮ ಫೇಸ್ ಬುಕ್ ಲೈವ್' ನಲ್ಲಿ 'ಹೆಸರಾಂತ ವಿಮರ್ಶಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ' ಬಿಡುಗಡೆ.


ಬುದ್ಧ ನೊಗದಳತೆಯಷ್ಟೇ ದಾರಿ ನೋಡುತ್ತ,
ರಾಜಧಾನಿಯ ಬೀದಿಬೀದಿಯಲಿ ನಡೆಯುವುದ
ನೋಡಿ, ಕರಗಿದ ಗರತಿಯರು ಕಣ್ಣ ಹನಿಯನ್ನು
ಸೆರಗಿನಲ್ಲೊರೆಸುವರು. ‘ಬೆಳ್ಗೊಡೆಯ ಅಡಿಯಲ್ಲಿ
ಬೆಳ್ಳಿ ರಥದಲಿ ಕೂತು ವಿಜಯಯಾತ್ರೆಗೆ ಹೋಗ-
ಬೇಕಾದ ದೊರೆಮಗನು, ತಲೆಯ ಬೋಳಿಸಿ, ಕಾವಿ
ಚೀವರವ ಧರಿಸಿ ಕೈಯಲ್ಲಿ ಕಪ್ಪರವನ್ನು
ಹಿಡಿದು ಮನೆಮನೆ ಮುಂದೆ ತುಟಿಯ ಪಿಟ್ಟೆನ್ನಿಸದೆ
ನಿಲ್ಲುವುದ ನೋಡಿದರೆ ಯಾವ ತಾಯಿಗೆ ಹೊಟ್ಟೆ
ಚುರ್ರೆನ್ನದಿದ್ದೀತು? ಹೇಗೆ ಮನಗೊಂಡನೋ
ಎಂದು ಬಿಸುಸುಯ್ಯುವರು. ಪತ್ನಿ ಪುತ್ರರ ಸಖ್ಯ
ದಲ್ಲಿ ಕಾಣದ ಯಾವ ಆನಂದ ಕಂಡನೋ
ಇಂಥ ನಿಷ್ಠುರ ವ್ರತಕೆ ಮನಮಾಡಿದನು ನೋಡಿ!’
ಎಂದು ಹಲುಬುತ್ತಾರೆ, ಮೂಗು ಸೊರಬುರ ಮಾಡಿ


ನೀನು ಊರನು ತೊರೆದು ಹೋದೆ. ಆಮೇಲೆ ಇ-
ಲ್ಲಾದದ್ದು ನಿನಗೆ ತಿಳಿದಿಲ್ಲ. ಸಂಸಾರವನು
ಬಿಟ್ಟು ಹೋದದ್ದಕ್ಕೆ ಆಕ್ಷೇಪಿಸದೆ ನಿನ್ನ,
ನನ್ನಿಂದ ಏನು ಅಪರಾಧವಾಯಿತೊ ತಿಳಿಯೆ.
ಏಕೆ ನೊಂದನೊ! ಏಕೆ ತೊರೆಯಬೇಕೆನ್ನಿಸಿತೊ?
ತಂದೆ ಮುಖವನ್ನೆ ಕಾಣದೆ ಬೆಳೆಯುವಂತಾಯ್ತೆ
ಕಂದಮ್ಮ? ಅದರ ತಪ್ಪೇನುಂಟು? ಹೆಂಗರುಳು
ಸಿದ್ಧಾರ್ಥನದು! ನನ್ನ ಕಣ್ಣಲಿ ಒಂದು ಹನಿ
ಕಂಡಿತೋ ಕೈಹಿಡಿದು ಹಲುಬುವನು ದಿನವಿಡೀ.
ಯಾರು ಏನೆಂದರೇ ಗೆಳತಿ? ಕಣ್ಣಲಿ ನೀರು
ಬರಬಾರದಮ್ಮ ಕೈಹಿಡಿದು ಬಂದಾಕೆಗೆ!
ಎಂದು ದಿನವಿಡಿ ಹಲುಬುತಿದ್ದ ಆ ಕರುಣಾಳು.
ಎಂದು ನೊಂದಳು ಎಂದ, ದೊರೆಯು ಅಮಿತಾಭಗೆ.
ಎಂಥ ಅಭಿಮಾನವೋ ಸೊಸೆಯಲ್ಲಿ ಅವನಿಗೆ|


ನೀನೇನೊ ಹೋದೆ ಸಂಸಾರ ಸಾಗರದಲ್ಲಿ
ಬಿದ್ದು ಒದ್ದಾಡುವೀ ಲೋಕದುದ್ಧಾರಕ್ಕೆ.
ತಪವ ಕೈಗೊಂಡೆ ಅನ್ನಾಹಾರವನು ತೊರೆದು.
ಇಲ್ಲಿ ಈಕೆಯು ನಿನ್ನ ಹಾಗೆಯೇ ತಪಿಸಿದಳು.
ನಾರು ಬಟ್ಟೆಯನುಟ್ಟು. ಮೆತ್ತೆಯಲಿ ಮಲಗದೆ.
ತೊಡದೆ ಆಭರಣ. ತಿನ್ನದೆ ಭಕ್ಷ್ಯ ಭೋಜ್ಯವ.
ಮನೆಯಲ್ಲೆ ಇದ್ದರೂ ಸನ್ಯಾಸಿನಿಯ ಹಾಗೆ
ಬದುಕಿದಳು. ಹೆತ್ತ ಕಂದನಿಗಾಗಿ ಒಪ್ಪಿಡಿಯ
ಉಪ್ಪುಖಾರಗಳಿರದ ಕೂಳುಂಡು! ನಾವು ಅ-
ತ್ತೇವೆಂದು ತಾನಳದೆ, ಹೇಗೊ ದುಃಖವ ಸಹಿಸಿ.
ನಿನ್ನ ತಪ ಫಲಿಸಲೆಂದೇ ಹಲವು ವ್ರತದಲ್ಲಿ
ತೊಡಗಿದಳು, ತಿನ್ನುಣ್ಣೊ ಹರಯದಲಿ ಸಾಧ್ವಿಯು,
ತುತ್ತಾದ ಹಾಗೆ ಮುಪ್ಪಿಗೆ ತನ್ನ ಹರಯದಲಿ;
ನಿನಗೆ ಗೆಲುವಾಗಲೆನ್ನುವ ಒಂದೆ ಬಯಕೆಯಲಿ.


ಕರುಣೆ ಉಕ್ಕಿತು ತರುಣಿಯಲ್ಲಿ ಅಮಿತಾಭನಿಗೆ.
ದೃಢವಾದ ಸ್ವರದಲ್ಲಿ ನುಡಿದ: ನಾನವಳನ್ನು
ಅವಳು ಇರುವಲ್ಲಿಗೇ ಹೋಗಿ ಸಾಂತ್ವನಿಸುವೆನು,
ಅರ್ಥವಾಗುವುದು ಆಕೆಗೆ ನನ್ನ ಕಳವಳವು.
ಅರಿಯುವಳು ಲೋಕಕಾಳಜಿಯ ಈ ಮನದಳಲು.
ಒಳಗೊಳ್ಳಲಾರದು ಸಮಷ್ಟಿಯನು ವ್ಯಷ್ಟಿಯು.
ಒಳಗೊಳ್ಳುವುದು ನೂರು ನದಿಯಳಲ ಹೆಗ್ಗಡಲು.
ನಾನು ನನಗಾಗಿ ಅಳುವುದು ಸಹಜ. ಲೋಕಕ್ಕೆ
ಅಳಬೇಕು ನೊಂದವರು. ಆಗಷ್ಟೆ ನೊಂದ ನೋ-
ವಿಗೆ ಅರ್ಥ ಎನ್ನುತ್ತ ಬುದ್ಧ ತಾನೇ ಹೋದ.
ಆತ್ಮಕೇಂದ್ರಿತ ಬದುಕ ತ್ಯಜಿಸುವುದೆ ಸನ್ಯಾಸ.
ಮಾತು ಮುಟ್ಟದು ಮನದ ಅನುಭೂತಿ. ಕೈಹಿಡಿದು
ನಡೆದವಳು ಅರಿತಾಳು ನನ್ನ ನಾಡಿಯ ಮಿಡಿತ;
ಎನ್ನುವುದು ಶಬ್ದಾರ್ಥ ಲೆಕ್ಖಿಸದ ಎದೆ ನುಡಿತ.


ಅಮಿತಾಭ ಇರುವಷ್ಟು ಕಾಲ ಹುಟ್ಟೂರಲ್ಲಿ
ನಿತ್ಯವೂ ನೂರಾರು ಮಂದಿ ಜಿಜ್ಞಾಸುಗಳು
ಬರುವಾರಾತನ ಬಳಿಗೆ. ಸಂಶಯದ ಪರಿಹಾರ
ಪಡೆದು ಆಗುತ್ತಾರೆ ಭಿಕ್ಕು, ದೀಕ್ಷೆಯ ವಹಿಸಿ.
ಅರಸು ಮನೆವಾಳ್ತೆಯಲು ಪ್ರತಿಯೊಂದು ಮನೆಯಿಂದ
ಒಬ್ಬೊಬ್ಬರಂತೆ ಬುದ್ಧನ ಶಿಷ್ಯರಾಗುವರು.
ನಂದ, ಆನಂದ, ಅನುರುದ್ಧ ಮೊದಲಾದವರು
ಮುಖ್ಯರವರಲ್ಲಿ. ಆ ದೇವದತ್ತನು ಕೂಡ.
ದಾಯಾದಿ ಬುದ್ಧನಿಗೆ. ಮೊದಲಿಂದಲೂ ದ್ವೇಷ
ಸಾಧಿಸುತ ಬಂದವನು. ಬುದ್ಧ ವೈಭವ ಈಗ
ಕಣ್ಕುಕ್ಕುವುದು ಅವನ. ಇಂದಲ್ಲ ನಾಳೆ ಸಂ-
ಘದ ಮುಖ್ಯನೆನ್ನಿಸುವ ಕನಸು ಕಾಣುತ್ತಾನೆ.
ಬುಧ್ಧನನುಯಾಯಿ ಆ ದೇವದತ್ತನು ಕೂಡ.
ಅರಿಯುವುದು ಅರಿದು ಮನದೊಳಗಿನೊಳಗಿನ ಜಾಡ.


ಬುದ್ಧ, ನ್ಯಗ್ರೋಧ ವನದಲ್ಲಿ ನೆಲೆಸಿದ್ದಾಗ
ಪ್ರತಿ ಸಂಜೆ ನಡೆಯುವುದು ಬುದ್ಧಧರ್ಮದ ಕುರಿತ
ಜಿಜ್ಞಾಸೆ. ಆಗಾಗ ಗೌತಮಿಯ ಜೊತೆಗೆ ಗುರು
ಪತ್ನಿಯೂ ಬಂದು ಕೇಳುವಳು ಬುದ್ಧನ ವಾಣಿ.
ತೆರೆಯುವುದು ಒಳಮನೆಗೆ ಆಗ ಎಷ್ಟೋ ಕಿಂಡಿ.
ಹೊಸಧರ್ಮದತ್ತ ಒಲಿಯುವುದು ಆಕೆಯ ಚಿತ್ತ.
ಬರುವಾಗ ತಿರುಗಿ ದಾರಿಯಲಿ ಆ ಅತ್ತೆ ಸೊಸೆ
ನಡೆಸುವರು ಸಂವಾದ ಹೊಸ ವಿಚಾರದ ಬಗ್ಗೆ.
ಕೆಲವು ಸಿಕ್ಕುಳಿದಾಗ ಗುರುವನ್ನೆ ಕೇಳಿ ಪರಿ-
ಹಾರ ಪಡೆಯಲು ಯಶೋಧರೆಯು ನಿಶ್ಚಯಿಸುವಳು.
ಅವಳ ಧಾರ್ಮಿಕ ಓಲುವೆಯು ಬಹಳ ಹಿತವೆನಿಸಿ,
ಪರಿಹರಿಸುವನು ಬುದ್ಧ ಶಂಕೆಯಕ್ಕರೆಯಿಂದ.
ಹೇಗೆ ಗಾಳಿಯ ತಂಪುಗೊಳಿಸುವುದೊ ಪುಷ್ಕರಣಿ
ಮನವ ಹಾಗೇ ಸ್ವಸ್ಥಗೊಳಿಸುವುದು ಗುರುವಾಣಿ.


ಶುದ್ಧೋದನನ ಸೋದರನು ಸುಕ್ಲೋದನ.
ಇಬ್ಬರಿದ್ದಾರೆ ಪುತ್ರರು. ಒಬ್ಬ ಅನುರುದ್ಧ.
ಇನ್ನೊಬ್ಬನಿಗೆ ಮಹಾನಾಮ ಎನ್ನುತ್ತಾರೆ.
ಬುದ್ಧಗುರುವಿನ ಪ್ರಭಾವಕ್ಕೆ ಅವರೊಳಗಾಗಿ
ಭಿಕ್ಕುವಾಗಲು ನಿಶ್ಚಯಿಸುವರು. ಅನುರುದ್ಧ
ಸಂಸಾರ ತ್ಯಾಗಕ್ಕೆ ತಾಯಿಯನುಮತಿಯನ್ನು
ಬೇಡುವನು. ತಾಯಿಗೋ ಅನುರುದ್ಧ ಸನ್ಯಾಸಿ
ಯಾಗುವುದು ಬೇಡವೆನಿಸಿದೆ. ಶಾಕ್ಯ ಜನಪದಕೆ
ಆಗ ಬದ್ಧೀಯ ಎನುವವನು ದೊರೆ. ತಾಯಿ ಹೇ-
ಳುವಳು: ಬದ್ಧೀಯ ಆದರೆ ಭಿಕ್ಕು ನಿನಗೂನು
ಅನುಮತಿಯ ನೀಡುವೆನು! ಅನುರುದ್ಧ ಹೋಗಿ ಬ-
ದ್ಧೀಯನನು ಕೇಳಿದರೆ ಒಪ್ಪೆಬಿಟ್ಟನು ಅವನು!
ಬದ್ಧೀಯನೊಡನೆ ಅನುರುದ್ಧ ತಾನೂ ಕೂಡ
ಸನ್ಯಾಸಿಯಾಗಿ ಹಿಡಿಯುವನು ಧರ್ಮದ ಜಾಡ!


ಮೇಲು ಕೀಳುಗಳಿಲ್ಲ, ಭೇದ ಭಾವಗಳಿಲ್ಲ.
ಎಲ್ಲರಿಗು ತೆರೆದಿರಲು ಬುದ್ಧ ಕಾರುಣ್ಯ ಮತ

ಕ್ಷೌರಿಕ ಉಪಾಲಿಯೂ ಭಿಕ್ಕುವಾಗುತ್ತಾನೆ!
ಸಮಸಮಾನತೆ! ಏಣಿಯಿರದ ಸಮ ಪಾತಳಿ.

ಶತಮಾನಗಳ ನೆತ್ತಿಭಾರ ಹಗುರಾಗುವುದು.
ಇದು ಮಹಾ ಬಿಡುಗಡೆಯ ಮಾರ್ಗ. ಹೆಗಲಿಗೆ ಹೆಗಲು
ತಾಗುತ್ತ ಸಾಗುವರು ಬುದ್ಧಾನುಯಾಯಿಗಳು,
ನಿಬ್ಬಾಣದೆಡೆಗೆ ದೃಢವಾದ ಹೆಜ್ಜೆಯನೂರಿ.
ಹಿರಿಯ ಭಿಕ್ಕುವಿಗೆ ಶರಣನೆನ್ನುವನು ಹೊಸದಾಗಿ
ಭಿಕ್ಕು ಆದವ! ತನ್ನ ಹಳೆಯ ಕಸರನು ಮರೆತು!
ಬುದ್ಧಚರಣವ ಹಿಡಿದು ಮುಕ್ತರಾಗುತ್ತಾರೆ
ಹಲವು ಹನ್ನೊಂದು ಕುಲದವರು ಭಿಕ್ಕುಗಳಾಗಿ!
ಕಾರುಣ್ಯವರ್ಷ ಸುರಿಯುವುದು ಎಲ್ಲಾ ಕಡೆಗು.
ಇಬ್ಬನಿಯ ಮುತ್ತು ಪ್ರತಿಯೊಂದು ಹುಲ್ಲಿನ ಹೆಡೆಗು.


ಭಿಕ್ಕುಗಳ ಸಂಘವಷ್ಟೇ ಸಾಕೆ ಭಗವಂತ?
ಬೇಡವೇ ಭಿಕ್ಕುಣಿಯ ಸಂಘ? ಕೇಳುತ್ತಾಳೆ
ತಾಯಿ ಗೌತಮಿ ಬುದ್ಧ ಗುರುವನ್ನು ಆಗಾಗ.
ನೀಡು ವಿಶ್ವದ ಅರ್ಧ ಭಾಗವೆನ್ನಿಸುವಂಥ
ಹೆಣ್ಣುಮಕ್ಕಳಿಗು ಕೂಡಾ ಯುಕ್ತ ಸಮಪಾಲು.
ಪುರುಷನುದ್ಧಾರವಷ್ಟೇ ಸಾಕೆ ಧರ್ಮಕ್ಕೆ?
ಅಸದಳವೆ ಸ್ತ್ರೀಯರಿಗೆ ವ್ರತ ನಿಷ್ಠೆ? ಕಾರುಣ್ಯ
ನಿಧಿಯೆ ಅನುಗ್ರಹಿಸು ಸ್ತ್ರೀಯರಿಗು ಭಿಕ್ಕುಣಿಯಾಗಿ
ನಿಬ್ಬಾಣ ಸಾಧಿಸುವ ಅವಕಾಶ! ಭಗವಂತ
ಮೌನವಹಿಸುತ್ತಾನೆ ಏಕೊ! ‘ಪ್ರಿಯ ಆನಂದ
ಕಾಲ ಕೂಡುವವರೆಗೆ ಕಾಯೋಣ’- ಎನ್ನುವನು.
ಒಳಮನದಲೇನು ಯೋಚನೆಯೊ ಭಗವಂತನಿಗೆ.
ಗೌತಮಿಯ ಕಣ್ಣಲ್ಲಿ ನೀರುಕ್ಕುವುದು ಆಗ.
ಸಂವರಿಸುವಳು ತಾಯಿ ಹೇಗೋ ತನ್ನ ಆವೇಗ.

೧೦
ಬುದ್ಧ ಧರ್ಮವು ಬರೀ ಸಾನ್ಯಾಸಿ ಧರ್ಮವೇ?
ಭಿಕ್ಕುಗಳ ಸಂಘವೊಂದುಂಟು. ನಿಜ. ಸಂಸಾರಿ
ಬುದ್ಧನನ್ನನುಸರಿಸಬಹುದುಪಾಸಕನಾಗಿ!
ಕೆಲವು ನಿಯಮಗಳುಂಟು ಈರ್ವರಿಗು! ಆಸ್ತಿಯನು
ಗಳಿಸಲನುಮತಿಯುಂಟುಪಾಸಕಗೆ. ಆಗಲು ಉ-
ಪಾಸಕನು ಸಂಸಾರಿಗಿಲ್ಲ ವಿಧ್ಯುಕ್ತ ವಿಧಿ!
ಭಿಕ್ಕುವಾಗುವುದಕ್ಕೆ ‘ಉಪಸಂಪದ’ ಎಂಬ
ವಿಧಿಯುಂಟು. ಯಾರುಪಾಸಕರು ಭಿಕ್ಕುಗಳ್ಯಾರು
ಎನ್ನುವುದ ತೀರ್ಮಾನಿಸುವನು ಬುದ್ಧನು ತಾನೆ!
ಹೀಗೆ ಬುದ್ಧನ ಧರ್ಮ ವಿಸ್ತಾರ ಪಡೆಯಿತು.
ಗಳಿಸಿದ್ದ ಸತ್ಪಾತ್ರರಿಗೆ ದಾನಮಾಡುತ್ತ
ಕರ್ಮಲೇಪವ ಕಳೆದುಕೊಳ್ಳುವನುಪಾಸಕ.
ಭಿಕ್ಕುಸಂಘದ ಅಸನ-ವಸನ-ವಸತಿಗಳನ್ನು
ಸಂಸಾರಿ ತನ್ನ ಬಾಧ್ಯತೆಯೆಂದು ತಿಳಿಯುವನು.

೧೧
ಸೋಪಾಕ ಎಂಬ ಬಾಲಕನನ್ನು ಮಲತಂದೆ
ಯಿಂದ ರಕ್ಷಿಸಿ ಅಭಯ ನೀಡಿದ್ದ ಅಮಿತಾಭ.
ಒಂದು ಯಾವುದು ಎಂದು ಕೇಳಿದರೆ ಬಾಲಕ
ಎಲ್ಲರಿಗೆ ಬೇಕಾದ ಅನ್ನ ಎನ್ನುತ್ತಾನೆ!
ಎರಡು ಯಾವುದು ಎಂದು ಕೇಳಿದರೆ ಬಾಲಕ
ವಿಶ್ವಸೃಷ್ಟಿಯು ನಾಮ-ರೂಪದಿಂದೆನ್ನುವನು.
ಲೋಭ-ಮೋಹ-ದ್ವೇಷ ಸಂಸಾರ ಸೆಳೆತಗಳು.
ನಾಲಕ್ಕು ಎಂದರವು ಆರ್ಯ ಸತ್ಯಗಳು.
ರೂಪ-ವೇದನೆ-ಸಂಜ್ಞೆ-ಸಂಕಾರ-ವಿಜ್ಞಾನ
ಐದು ಎನ್ನುತ್ತಾನೆ ದಿಟ್ಟ ಸ್ವರದಲಿ ಹುಡುಗ.
ಆರು? ಪಂಚೇಂದ್ರಿಯ ಮತ್ತು ನಮ್ಮ ಮನಸ್ಸು.
ಏಳು ಬೋಧಿಯ ಅಂಗವೆನ್ನುವನು ಬಾಲಕ.
ಎಂಟು ಅಷ್ಟಾಂಗಗಳು. ಲೋಕಗಳು ಒಂಭತ್ತು.
ಬುದ್ಧಗುರುವೇ ನಿನ್ನ ಪಾರಮಿಗಳಿವೆ ಹತ್ತು!

೧೨
ನಂದ ಬುದ್ಧನ ತಮ್ಮ. ಕಲ್ಯಾಣಿ ಅವನ ವಧು.
ಅವಳ ಮೋಹದಲಿ ಮೈಮರೆತಿರುವ ನಂದನನು
ಉದ್ಧರಿಸಬೇಕೆಂದು ಒಮ್ಮೆ ಭಿಕ್ಷಾಪಾತ್ರೆ
ಕೊಂಚ ಹಿಡಿದುಕೊ ಎಂದು ಹಸ್ತದಲ್ಲಿರಿಸಿದವ

ಮರಳಿ ಹಿಂದಕ್ಕದನು ತೆಗೆದುಕೊಳ್ಳಲೆ ಇಲ್ಲ!
ಬುದ್ಧನೆಂದರೆ ಮಹಾ ಭಕ್ತಿ ಆ ನಂದನಿಗೆ.
ಹೀಗೆ ಭಿಕ್ಷಾಪಾತ್ರೆ ಹಿಡಿದು ಆದನು ಭಿಕ್ಕು.
ಭಿಕ್ಕುವಾಗಲು ಸಾಧ್ಯವೇ ಮನದ ಹದವಿರದೆ?
ಕೇಳುವನು: ಹಿಂದಿರುಗಲನುಮತಿಯ ಕರುಣಿಸು!
ಯೋಗಶಕ್ತಿಯ ಬಳಸಿ ತೋರುವನು ಭಗವಂತ
ಸರ್ವಾಂಗ ಸುಂದರಿಯರಾದ ಅಚ್ಚರಸಿಯರ!
‘ನನಗೆ ಸಿಕ್ಕರೆ ಇವರು, ಭಿಕ್ಕುವಾಗುಳಿವೆನು.’
ಹಿರಿಯ ಸಾಧನೆ ಮಾಡಿ ಅರಹಂತನಾಗುವನು.
ಈಗ ಕಾಯದು ದೀಪ, ಬತ್ತಿ ಎಣ್ಣೆಗಳನ್ನು.

೧೩
ಬುದ್ಧಗುರುವನು ಬೇಡಿ ಯಾವುದಕ್ಷಯ ನಿಧಿಯೊ
ಅದನು ಪಡೆಯೆಂದು ರಾಹುಲಮಾತೆ ಹೇಳುವಳು.
‘ಯಾವತ್ತು ತೀರದಕ್ಷಯ ನಿಧಿಯು ಕಪ್ಪರ!
ಭಂತೆ, ಈ ಬಾಲನಿಗೆ ಭಿಕ್ಕು ದೀಕ್ಷೆಯ ನೀಡು’
ಎನ್ನುವನು ಭಗವಂತ ಸಾರಿಪುತ್ರನಿಗಾಗ.
ಹೀಗೆ ಸಮಣೇರನಾದನು ಪುಟ್ಟ ಬಾಲಕನು.
ಕಣ್ಣೀರ ಕರೆಯುತ್ತ ಶುದ್ಧೋದನನು ಬಂದು
ಬೇಡುವನು ಬುದ್ಧನನು: ‘ತಂದೆಯೊಪ್ಪಿಗೆ ಇರದೆ
ಮುಂದೆ ನೀನೆಂದಿಗೂ ಭಿಕ್ಕುಪಟ್ಟವ ನೀಡ-
ಬೇಡ ಭಗವಂತನೇ ಮಕ್ಕಳಿಗೆ!’- ಎನ್ನುವನು.
ಮಾತುಕೊಡುವನು ಬುದ್ಧ ವೃದ್ಧದೊರೆಗಾವತ್ತು.
ಭಿಕ್ಕುವಾಗಲು ಮುಂದೆ ಹಿರಿಯರನುಮತಿ ಅಗತ್ಯ.
ಕಡ್ಡಾಯ ನಿಯಮವಿದು. ತಂದೆಯೊಪ್ಪಿಗೆಯಿರದೆ
ಭಿಕ್ಕು ದೀಕ್ಷೆಯ ನೀಡುವಂತಿಲ್ಲ ಬಾಲರಿಗೆ.

೧೪
ಮುಂಜಾನೆ ಕೋಸಲದ ಶ್ರಾವಸ್ತಿಯಿಂದೊಬ್ಬ
ವಾರ್ತವಾಹಕ ಬಂದ. ಶ್ರಾವಸ್ತಿಯಲಿ ದಂಡ-
ಪಿಂಡಕನು ಕಟ್ಟತೊಡಗಿದ್ದ ಬುದ್ಧವಿಹಾರ
ಪೂರ್ಣಗೊಂಡಿದೆಯೆಂಬ ಶುಭವಾರ್ತೆಯನು ತಂದ.
ಜೇತವನದ ವಿಹಾರವನ್ನು ಅಮಿತಾಭನೇ
ಸ್ವೀಕರಿಸಬೇಕಿತ್ತು. ಮಾರನೆಯ ದಿನ ಕಪಿಲ-
ವಸ್ತುವನು ಬಿಟ್ಟು ಕೋಸಲದತ್ತ ನಡೆಯುವುದು
ಎಂದು ಸುಗತನು ನಿರ್ಧರಿಸಿ ಶುದ್ಧೋದನನ
ಅನುಮತಿಯ ಪಡೆದನು. ತಾಯಿ ಗೌತಮಿ ಮತ್ತು
ಪೂರ್ವಾಶ್ರಮದ ಸತಿಗೆ ಹೇಳಿ ಕೊನೆಯ ವಿದಾಯ
ಮರು ದಿವಸ ಆ ಭಿಕ್ಕು ಸಮುದಾಯದೊಂದಿಗೆ
ಶ್ರಾವಸ್ತಿಯಾತ್ರೆ ಕೈಗೊಳ್ಳುವನು ಅಮಿತಾಭ.
ಬುದ್ಧನೊಡನೆ ಕುಮಾರ ರಾಹುಲನು ಹೊರಟನು,
ಒದ್ದೆಗಣ್ಣಿನ ತಾಯಿ, ವೃದ್ಧರನು ಬೀಳ್ಕೊಂಡು.

೧೫
ಜೇತವನ ಜೇತ ಎನ್ನುವ ರಾಜಪುತ್ರನಿಗೆ
ಸೇರಿದ್ದು. ಭಾರಿ ಬೆಲೆ ತೆತ್ತು ಜೇತವನವನ್ನ
ಕೊಂಡನು ಅನಾಥಪಿಂಡಕನೆಂಬ ಸಿರಿವಂತ.
ಬಹು ದೊಡ್ಡ ಗಾತ್ರದ ವಿಹಾರವನು ಕಟ್ಟಿದನು
ಬುದ್ಧ ವಾಸ್ತವ್ಯಕ್ಕೆ. ಬಿಟ್ಟುಕೊಟ್ಟನು ಜೇತ
ತನ್ನ ಪಾಲಿನ ಭೂಮಿಯನ್ನು ಕಾಣಿಕೆಯಾಗಿ.
ಈಗ ನಿರ್ಮಾಣ ಕೊನೆಗೊಂಡಿಹುದು. ಬುದ್ಧನೇ
ಆ ವಿಹಾರವ ಕೈಯಾರೆ ಸ್ವೀಕರಿಸುವನು.
ಕೋಸಲದ ರಾಜ ಪಸೇನದಿ ಕೂಡ ಬರಲಿಹನು
ಆ ವಿಹಾರದ ಅರ್ಪಣೆಯ ಶುಭ ಉತ್ಸವಕೆ.
ಏನುಂಟು ಏನಿಲ್ಲ ಜೇತವನದ ವಿಹಾರ
ದಲ್ಲಿ? ಅಂಥ ವಿಹಾರ ಯಾರು ಕಟ್ಟಿರಲಿಲ್ಲ.
ವಾಚನಾಲಯ. ಭೋಜನ ಶಾಲೆ. ಅಂಗಣ.
ಎಷ್ಟು ಜನ ಕೂತರೂ ತುಂಬದ ಸಭಾಂಗಣ

೧೬
ಅಲ್ಲಲ್ಲಿ ಪುಷ್ಕರಣಿ. ನಡೆಹಾದಿ. ಸ್ನಾನ ಗೃಹ.
ಹಲವು ಖೋಲಿಯ ಬಲುಮಹಡಿ ಕಟ್ಟಡ ಹಲವು.
ಬುದ್ಧ ಗುರುವಿಗೆ ವಿಸ್ತೃತ ಧ್ಯಾನ ಮಂದಿರ.
ಉಗ್ರಾಣ. ಸಾಲು ಶೌಚಾಲಯಗಳಲ್ಲಲ್ಲಿ.
ಭಿಕ್ಕುಗಳ ಯೋಗಸಾಧನೆಗೆ ಶಿಲಾಮಂಟಪ.
ಕಾಲಕಾಲಕೆ ಹೂವ ಬಿಡುವ ನಾನಾ ಬಗೆಯ
ವೃಕ್ಷಗಳು. ಕಾರಂಜಿ. ಹಸಿರು ದಿಣ್ಣೆಯ ಮೇಲೆ
ಬೋಧಿವೃಕ್ಷದ ಕಟ್ಟೆ. ಬುದ್ಧನಿಗೆ ಪ್ರಿಯವಾದ
ಗೋಣಿ ಮರ. ಮಾವು ಆಲದ ವೃದ್ಧ ವೃಕ್ಷಗಳು.
ಸಂಪಗೆ ಸಿರಿಹೊನ್ನೆ ಬನ್ನಿ ಬೇವಿನ ಕಟ್ಟೆ.
ಪೂರ್ವದಿಕ್ಕಲ್ಲೊಂದು ದೊಡ್ಡ ತಾವರೆ ಕೆರೆ.
ಗಡಗ ತೊಡಿಸಿದ ಶುದ್ಧ ತಿಳಿನೀರ ಬಾವಿಗಳು.
ಪಾರಿಜಾತದ ನವುರುಗಂಪು. ತೊಂಗಲಿನಲ್ಲಿ
ಮೈಮರೆಸಿ ಕೂತ ಕೋಗಿಲೆಯು ಕೂಜನವಲ್ಲಿ.

೧೭
ಮುಂದೆ ಈ ಜೇತವನ ಪ್ರಿಯವಾಯ್ತು ಸುಗತನಿಗೆ.
ತನ್ನ ಜೀವಿತದ ಬಹು ಕಾಲ ಕಳೆದದ್ದಾತ
ಈ ಜೇತವನದಲ್ಲೆ. ಸುಮುಹೂರ್ತದಲಿ ಪಿಂಡಕನು
ಜೇತವನವನ್ನು ಅರ್ಪಿಸಿದ ಗುರು ಬುದ್ಧನಿಗೆ.
ಅಂದು ಅಮಿತಾಭ ಆಡಿದ ಮಾತ ಯಾರೂನು
ಮರೆಯುವಂತೆಯೆ ಇಲ್ಲ. ಮತ್ತೆ ಉಬ್ಬರವಿಳಿತ-
ವಿರದ ಗಂಭೀರ ಬೋಧಾಮೃತವು ಹರಿದಿತ್ತು
ತಿಳಿನೀರ ಹೊಳೆಯಂತೆ. ಮಂತ್ರಮುಗ್ಧನು ಪಸೇ
ನದಿ ಪ್ರಭುವು. ಬುದ್ಧ ಬೋಧಾಮೃತವು ಯಾವುದೋ
ಲೋಕಕ್ಕೆ ಕೊಂಡೊಯ್ದ ಹಾಗೆ ತೋರಿತು ದೊರೆಗೆ.
ಬುದ್ಧ ಹೇಳಿದ: ನಿತ್ಯ ಪರಿವರ್ತನೆಯೆ ಲೋಕ
ಗುಣ! ಈಗ ಬಿರುಗಾಳಿ ಮರುಗಳಿಗೆ ನಿಷ್ಪಂದ
ಎಲೆ ಕೂಡ ಅಲ್ಲಾಡುತಿಲ್ಲ. ಧಗಧಗ ಹಾದಿ
ಈಗ. ಮರುಗಳಿಗೆ ಮುಸ್ಸಂಜೆ. ಇರುಳಿನ ಬೂದಿ. |

೧೮
ಕಂಚುಗನ್ನಡಿ ನಿತ್ಯ ನಿತ್ಯ ಬದಲಾಗುತಿದೆ.
ಬೊಕ್ಕ ತಲೆ. ಎಲ್ಲಿ ಹೋದವು ನಿಮ್ಮ ಮುಂಗುರುಳು?
ನೀವು ಆತನೊ ಅಥವಾ ಇದು ಭವಾಂತರವೊ?
ನೆಲಗುದ್ದಿ ನೀರ ಎತ್ತುತಿದ್ದಿರಿ ಹಿಂದೆ. ಈಗ ಕಾ-
ಲೆತ್ತಿಡುವುದೂ ಕಷ್ಟ! ಗಿರಿಯಲ್ಲ, ಮನೆಯ ಸೋ-
ಪಾನ ಹತ್ತುವುದಕ್ಕೆ ಏದುಸಿರು. ಎಷ್ಟು ಮುತು-
ವರ್ಜಿ ಈ ದೇಹ ಪೋಷಣೆಗೆ! ಎಷ್ಟು ಪೌಷ್ಟಿಕ
ಧಾತು! ಅತಿಯಾದ ಲಾಲನೆ ಪಾಲನೆಯ ಮಾಡಿ
ಪೊರೆದದ್ದು ಕಾಯವನು! ಬಾಳಿಕೆಯು ಬರದೊಡಲು!
ಕರ್ಮಾಶ್ರಿತವು ದೇಹ ಎನ್ನುವುದ ತಿಳಿಯಿರಿ!
ತೊಡಗಿ ನಿವೃತ್ತಿಯಲಿ! ಪ್ರವೃತ್ತಿ ದುಃಖಮಯ.
ಕಾಲ ಬರುವನು ಕಾಲ ಸಪ್ಪುಳವು ಕೇಳುವುದು.
ಏನು ಬರುವುದು ಜೊತೆಗೆ ಯೋಚಿಸಿರಿ ನೀವೆಲ್ಲ.
ಆಳಿಲ್ಲ ಕಾಳಿಲ್ಲ ಮನೆಯಿಲ್ಲ ಮಠವಿಲ್ಲ!

೧೯
ಇಲ್ಲವಾಗುವುದೊಂದೆ ಇರಲು ಇರುವ ಉಪಾಯ.
ಕಾಮವಾಸನೆಯಿಂದ ದೂರವಾದರೆ ಸಾಧ್ಯ
ದುಃಖದ ವಿಮೋಚನೆ. ಧರ್ಮವೆಂಬುದೆ ದೀಪ.
ದೀಪವಿದ್ದರೆ ದಾರಿ ಕಾಣುವುದು ಇರುಳಲ್ಲು.
ಈ ಮಹಾಶಯ ಧರ್ಮದೀಪ ಕೈಯಲಿ ಹಿಡಿದು
ಇರುಳು ಸಾಗಿದ್ದಾನೆ ನಿರ್ಭೀತ. ಗಳಿಸಿದ್ದ
ಅಳಿಸಿ ಕಳೆಯದೆ ಈತ ಕೊಟ್ಟು ಉಳಿಸಿದ್ದಾನೆ.
ಹೀಗೆ ಕೆಲವರು ಗೃಹಸ್ಥರಾಗಿದ್ದೂ ಸ್ವಸ್ಥರು.
ನಿಜವಾದ ಅರ್ಥದಲಿ ಬುದ್ಧಾನುಯಾಯಿಗಳು.
ಆಲಯದಲಿದ್ದೇನೆ ಬಯಲ ಸಾಧಿಸಿದವರು.
ಬುದ್ಧಮಾರ್ಗವು ಸಂಸಾರಿಗೂ ತೆರೆದಿದೆ.
ತೋರು ಬೆರಳಲಿ ಊರ ಹೆಸರನ್ನು ಬರೆದಿದೆ.
ಬುದ್ಧ, ನಿರ್ವಾಣ ಮಾರ್ಗಕ್ಕೆ ಕೈಮರ ಮಾತ್ರ.
ನಡೆಯುವುದು ನೀವೆ; ನೋಡುವುದು ನಿಮ್ಮದೆ ನೇತ್ರ.

೨೦
ಬುದ್ಧದಿವ್ಯತೆ ದೇವದತ್ತನಿಗೆ ಹೊಟ್ಟೆಯುರಿ!
ರಾಜಗೃದಲ್ಲೀಗ ಬಿಂಬಿಸಾರನ ಪುತ್ರ
ಬಲವಂತದಿಂದ ಹಿರಿ ದೊರೆಯ ಸೆರೆಯಲ್ಲಿಟ್ಟು
ತಾನೆ ಪ್ರಭುವೆಂದು ಅಧಿಕಾರ ಹಿಡಿದಿದ್ದಾನೆ.
ಅವನನ್ನು ನಾನು ಕೈವಶ ಮಾಡಿಕೊಳ್ಳುವೆನು
ಎಂಬ ನಿಶ್ಚಯದಿಂದಜಾತಶತ್ರುವ ಬಣ್ಣ
ನುಡಿಯಿಂದ ಮರುಳುಗೊಳಿಸುತ ಕಿವಿಯ ಚುಚ್ಚುವನು.
ಬಿಂಬಿಸಾರನ ಮರುಳು ಮಾಡಿ ಅಮಿತಾಭನು
ರಾಜ್ಯ ಬೊಕ್ಕಸ ಸೂರೆ ಮಾಡಿರುವನೆನ್ನುವನು.
ಬಿಂಬಿಸಾರನ ಮಿತ್ರ ತನಗೆ ಶತ್ರು ಎಂದು
ನಂಬುವನು ದೇವದತ್ತನ ಮಾತ ಹೊಸರಾಜ.
ಯಾರದ್ದೊ ತಟ್ಟೆ. ಬಿಟ್ಟಿ ಕೂಳು ಭಿಕ್ಕುಗಳುಂಡು
ಅಲೆಯುವರು ಸನ್ಯಾಸಿ ಸೋಗಲ್ಲಿ ಊರೂರು
ಎಂಬ ಅಪವಾಕ್ಯವೇ ದೇವದತ್ತನ ದೂರು.

೨೧
ಬುದ್ಧ ಧರ್ಮದ ತಿರುಳು ಹೇಗೆ ಸರಳವೊ ಹಾಗೆ
ಬುದ್ಧ ದೈನಿಕ ಕೂಡ ಸರಳ. ಆ ಸರಳತೆಯೆ
ಇತರರನುಸರಣಕ್ಕೆ ಕಷ್ಟ! ಬೆಳಗಿನ ಜಾವ
ನಸುಕಲ್ಲೆ ಬುದ್ಧ ಏಳುತ್ತಾನೆ. ಎದ್ದವನು
ತನ್ನ ಸ್ನಾನಕೆ ತಾನೆ ನೀರನನುಗೊಳಿಸುವನು.
ತನ್ನ ಚೀರವ ತಾನೆ ಒಗೆದು ಶುಚಿಗೊಳಿಸುವನು.
ಆ ಬಳಿಕ ರೋಗಪೀಡಿತ ಭಿಕ್ಕುಗಳ ನೋಡಿ
ಶುಶ್ರೂಷೆ ಮಾಡುವನು. ಮತ್ತೆ ಮಧ್ಯಾಹ್ನವಾ
ಗುವ ತನಕ ಧ್ಯಾನದಲಿ ತೊಡಗುವನು. ಆ ಬಳಿಕ
ಹಿಡಿದು ಭಿಕ್ಷಾಪಾತ್ರೆ ಹತ್ತಿರದ ಊರಲ್ಲಿ
ಅನ್ನ ಸಂಗ್ರಹ. ಜೊತೆಗೆ ಕೆಲವರೇ ಶಿಷ್ಯರು.
ಕರೆದಾಗ ಮನೆಗೆ ಶಿಷ್ಯರ ಜೊತೆಗೆ ಭೋಜನ.
ಮೆಲುದನಿಯ ಸಂವಾದ. ಮಿತ ಪ್ರಮಾಣದ ಊಟ.
ಉಪದೇಶ, ಕೇಳಿದರೆ ಧ್ಯಾನ ಯೋಗದ ಪಾಠ.

೨೨
ಆ ಬಳಿಕ ಬಂದು ಬಿಡದಿಗೆ ಕೊಂಚ ವಿಶ್ರಾಂತಿ.
ಬಳಿಕ ಭಿಕ್ಕುಗಳೊಡನೆ ಏಕಾಂತ ಸಂವಾದ.
ಅವರು ಧ್ಯಾನಕೆ ಹೋದ ಬಳಿಕ ತಾನೊಬ್ಬನೇ
ಧ್ಯಾನದಲಿ ತೊಡಗುವುದು! ಬಿಸಿಲಿಳಿದು ಸಂಜೆಯಾ
ದರೆ ನೆರೆದ ಗುಂಪಿಗೆ ಮೈದಾನದುಪದೇಶ.
ಬಳಿಕ ಸಂಜೆಯ ಸ್ನಾನ. ಶಿಶ್ಯರೊಂದಿಗೆ ಮಾತು.
ಸಂಶಯದ ಪರಿಹಾರ. ಬಳಿಕ ಏಕಾಂತ ಕ್ಷಣ.
ಧ್ಯಾನ ಮಾಡುತ್ತಲೇ ಕಿರುದಾರಿ ಶತಪಥ.
ಮಳೆಬರಲಿ, ಛಳಿಯಿರಲಿ ದೈನಿಕವು ತಪ್ಪದು.
ಕಿರುಗೊಡೆಯ ಹಿಡಿದು ಹನಿಮಳೆಯಲ್ಲೆ ಬುದ್ಧಗುರು
ನಡೆಯುವದ ನೋಡುವರು ಭಿಕ್ಕುಗಳು ಶಿರಬಾಗಿ.
ಇದು ಕಾಲ ಕ್ರಮಣ. ನಿತ್ಯಾಚಾರ ನೈಷ್ಠಿಕತೆ.
ಆಗಾಗ ನಿಂತು ಮಾತಾಡುವನು ಚಿಗುರೊಡೆದ
ಮರದೊಡನೆ. ಸೌಖ್ಯವೇ ಎನ್ನುವನು ನಸುನಗುತ.

೨೩
ಸಹಿಸಲಾರದು ಪೂರ್ಣಚಂದ್ರಮನ, ಉದ್ವಿಗ್ನ
ಕ್ರುದ್ಧ ವಾರಿಧಿ. ಬುಸುಗುಟ್ಟುವುದು, ಹೆಡೆಯನ್ನು
ರಪ್ಪನಪ್ಪಳಿಸಿ ಭೋರ್-ಭೋರೆಂದು ಅಬ್ಬರಿಸಿ
ಮಾರಿಯ ಉಪಾಸಕರು ಉರುಮೆ ರೌರವ ರವಕೆ
ಆವೇಶಗೊಂಡು ಚಾವಟಿಯಿಂದ ತಮ್ಮನ್ನು
ತಾವೆ ಬಾರಿಸುತ ಬರೆಗೊಳ್ವಂತೆ, ಜಿನುಗಿ ನೆ
ತ್ತರು, ಒಡಲು ರಕ್ತಚಂದನದ ತರುವಾಗುತಿರೆ.
ಬುದ್ಧ ಚಂದ್ರೋದಯವ ಸಹಿಸಲಾರದೆ ಬೇರೆ
ಧರ್ಮಾನುಯಾಯಿಗಳು, ಸುತ್ತ ನಾಕೂ ದಿಕ್ಕಿ
ನಿಂದ ಆಕ್ರಮಿಸುವರು ಕಡಲ ನಡುವಿನ ದೀವಿ
ನಿಲ್ಲಲಾದೀತೆ ನೋಡುತ್ತೇವೆ ಎನ್ನುವಂತೆ.
‘ಬಾಯ್ಗೆ ಬಂದದ್ದ ಬಗುಳುತ್ತಾನೆ ಸಮಣ ಮುನಿ:
ಆತ್ಮವೇ ಇಲ್ಲ. ಇಲ್ಲ ಸೃಷ್ಟಿಕಾರನ ಗೊಡವೆ
ನಾವೆ ದಾರಿಯ ನಡೆದು ಊರ ತಲಪುತ್ತೇವೆ!’

೨೪
ನಡೆಯುವುವು ವಾಗ್ವಾದ ಚರ್ಚೆ! ನುಡಿ ಸೋತಾಗ
ಆಗುವುದು ಕೈ ಮುಂದು. ತಿಳಿಯ ಬಲ್ಲವರು ತಿಳಿ-
ಗೊಳ್ಳುವರು. ಸುಗತ ದನಿ ಎತ್ತಿ ಸಂಘರ್ಷಕ್ಕೆ
ಕರೆಗೊಡದೆ, ಆಳ ನದಿ ಹರಿವಂತೆ ಹರಿಯುವನು.
ಪಥ್ಯವಾದವರು ಮೀಯುವರು; ತಣಿಸುತ ದಾಹ.
ಹರಿಯುವರು ಹರಿದು ಬೆರೆಯದ ಹಲವು ತೊರೆಯಂತೆ
ಉಳಿದವರು. ಕಸವರದ ಅರ್ಥ ಬಲ್ಲಂಥವರು
ನಡೆಯುವರು ತಮ್ಮ ನಡೆಯನು ತಾವು. ಸಂಘದಲೆ
ಒಡಕು ಹುಟ್ಟಿಸುವ ಯತ್ನದಲಿ ತೊಡಗುತ್ತಾರೆ
ಕಾಷಾಯ ಮೊಗವಾಡದಲ್ಲಿ ಮುಖ ಮರೆಮಾಡಿ
ಕೊಡೆ ಹಿಡಿದೆ ಬೆನ್ನಿಗಿರಿಯುವ ಧೂರ್ತ ವ್ಯಕ್ತಿಗಳು!
ನಡೆಯುತಿವೆ ಸಂಘದಲೆ ಬಗೆಬಗೆ ಕುಯುಕ್ತಿಗಳು.
ಅವರಲ್ಲಿ ಹಿರಿಯ ಮುಂದಾಳು ಬುದ್ಧನ ರಕ್ತ-

ಬಂಧು! ಮಾಡಿದ್ದೆಲ್ಲ ಸ್ವಾರ್ಥಸಿದ್ಧಿ ಪ್ರಯುಕ್ತ.

೨೫
ಪೂರ್ಣನೆನ್ನುವ ಭಿಕ್ಕು ಸುಗತನಲ್ಲಿಗೆ ಬಂದು
ಬೇಡಿದನು: ಪೂಜ್ಯನೇ ಅನುಮತಿಯ ನೀಡೆನಗೆ.
ಕಂಡರಾಗದ ಕ್ರೂರಿಗಳಿಗಹಿಂಸಾತತ್ವ
ಬೋಧಿಸಲು ಹೊರಟಿರುವೆ. ಸಂತೋಷವೆನ್ನುತ್ತ
ಪೂರ್ಣನನು ಕೇಳಿದನು. ಭಿಕ್ಕುವೇ ನಿಂದಕರು
ಬೈಯುವರು. ಆಗ ನೀನೇನು ಮಾಡುತ್ತೀಯ?
ಬೈದರಷ್ಟೇ; ಹೊಡೆಯಲಿಲ್ಲ ಎನ್ನುತ್ತೇನೆ!
ಭಿಕ್ಕುವೇ ಅವರು ಹೊಡೆದರೆ ನಿನ್ನ? ಹೊಡೆದರೆ,
ಹೊಡೆದರಷ್ಟೆ! ಎಂಥ ಒಳ್ಳೆ ಜನ! ಅಲುಗಿಂದ
ತಿವಿಯಲಿಲ್ಲೆನ್ನುವೆ! ಅವರು ತಿವಿದರೆ ನಿನ್ನ?
ತಿವಿದರಷ್ಟೇ! ಕೊಲ್ಲಲಿಲ್ಲ ಎನ್ನುತ್ತೇನೆ!
ಮಸಲ ಆ ನಿಂದಕರು ಕೊಂದೆಬಿಟ್ಟರೆ ನಿನ್ನ?
ಹೊರೆಯನಿಳಿಸಿದರೆಂಥ ಒಳ್ಳೆಜನ ಎನ್ನುವೆ!
ಬುದ್ಧ ಹರಸಿದ! ಹೋಗು ಕೃತಕೃತ್ಯನಾಗುವೆ!

೨೬
ಬೋಧಿಯಾಗಿಪ್ಪತ್ತು ವರ್ಷ ಕಳೆದಿದ್ದಾವೆ.
ಜೇತವನದಾರಾಮದಲ್ಲಿ ಇದ್ದನು ಬುದ್ಧ.
ಲೋಕದಲಿ ಎಂತೆಂಥ ವಿಕೃತರಿದ್ದಾರೆಂದು
ಯೋಚಿಸುತ. ದುಷ್ಟ ಅಂಗುಲಿಮಾಲ ಎನ್ನುವವ
ಘೋರ ಕರ್ಮಗಳಲ್ಲಿ ತೊಡಗಿರುವುದನು ತಿಳಿದು.
ನಿರ್ದಯಿ. ಕ್ರೂರಿ. ಹಿಂಸಾನಂದ. ಕೊಲೆ ದರೋ-
ಡೆಯಲಿ ತೊಡಗಿದ್ದಾನೆ ಜಾಲಿನೀ ವನದಲ್ಲಿ.
ಜನ ಅತ್ತ ಸುಳಿಯಲೂ ದಿಗಿಲು ಪಡುವರು ಈಗ.
ಹಿಂದಿನಿರುಳಲ್ಲು ಕೊಂದಿದ್ದಾನೆ ಹಲವರನು.
ಯೋಚಿಸುತ ಕುಳಿತಿದ್ದ ಬುದ್ಧ ಎದ್ದನು ಏನೊ
ನಿಶ್ಚಯಿಸಿ! ಈಗಲೇ ಹೊರಟೆ ಜಾಲಿನಿಗೆನುತ.
ಕೋಸಲದ ದೊರೆಗೆ ಕೂಡಾ ತಿಳಿಯಬಾರದಿದು.
ಎಂದು ಆನಂದನಿಗೆ ತಿಳಿಸಿ ಅಮಿತಾಭನು
ಹೊರಟೆಬಿಟ್ಟನು ಕಾಣಲು ಪರಮ ದುಷ್ಟನನು.

೨೭
ನಿಶ್ಚಯದ ಸದೃಢತೆ ಬುದ್ಧಚರಣದಲಿತ್ತು.
ಜಾಲಿನಿಯ ಸನಿಯ ಬಂದಾಗ ದನಗಾಹಿ ಎದು-
ರಾಗಿ ಹೇಳುತ್ತಾನೆ ಮುಂದೆ ಕಾನನ ಕಣಿವೆ.
ಅಲ್ಲಿ ಅಲೆಯುತ್ತಾನೆ ಹಿರಿದ ಕತ್ತಿಯ ಹಿಡಿದು.
ಕ್ರೂರಮೃಗಗಳಿಗಿಂತ ಕ್ರೂರಿ ಅಂಗುಲಿಮಾಲ.
ಕೊಂದವರ ಬೆರಳ ಮಾಲೆಯೆ ಅವನ ಜಪಸರ!
ಹಾಗಾದರವನ ಕಾಣಲೆ ಬೇಕು ನಾನೆನುತ
ಬುದ್ಧ ನಡೆದನು ಘೋರ ಜಾಲಿನಿಯ ಒಳಹೊಕ್ಕು.
ಸಾರ್ಥಗಾರರ ಬಂಡಿಸಾಲು ಸಾಗಿದ ಜಾಡು
ಹಿಡಿದು ಹೊರಟನು ಬುದ್ಧ ಏಕಾಂಗಿ. ಆನಂದ-
ನನ್ನು ಹಿಂದೆಯೆ ಬಿಟ್ಟು. ಕಾಡ ಜೀಕಾರ ಕೇ-
ಳುತ್ತ, ನೋಡುವೆ ದಾರಿತಪ್ಪಿರುವ ಕಂದನ್ನ
ಎನ್ನುತ್ತ ತನ್ನಲ್ಲೆ ತಾನು ಆ ಕರುಣಾಳು;
ಕಿರಣ ಬಿಡಿಸುತ್ತ ಇರೆ ಹೆಗ್ಗಾಡ ಮುಂಗುರುಳು.

೨೮
ಇರುಳು ಕವಿಯಿತು. ಕಾಳಗಪ್ಪು ಕತ್ತಲೆ ಮೆಲ್ಲ
ಮೆಲ್ಲ ತಿಳಿಯುತ್ತ ಇದೆ. ನಕ್ಷತ್ರ ಹೊಳೆಯಲ್ಲಿ
ಯಾರೊ ತೇಲಿಸಿ ಬಿಟ್ಟ ಹಣತೆಯಂತಿದ್ದಾನೆ
ಅರೆಚಂದ್ರ ಮೇಲೆ ಕಣ್ಮುಚ್ಚಾಲೆಯನ್ನಾಡುತ್ತ
ಮರದ ಹರೆ ನಡುವೆ. ಹೆಗ್ಗಾಡು ಮೈದಾಳುತಿದೆ
ಕಿವಿಯಲ್ಲಿ. ಕ್ರಿಮಿಕೀಟದೆಡೆಬಿಡದ ಜೀಕಾರ
ಶ್ರುತಿಯಾಗಿ ಮೊರೆಯುತಿದೆ. ಮಿದಿಯುವನು ಮದ್ದಲಿಗ
ವ್ಯಾಘ್ರಗರ್ಜನೆ ತಾಳ ಗತಿಯನ್ನು. ನಕ್ಷತ್ರ
ಶುರುಹಚ್ಚಿದವು ಈಗ ನಿಶ್ಶಬ್ದ ಗಾಯನವ.
‘ನಿಲ್ಲು ನಿಲ್ಲೆ’ಂದು ಕೂಗುವರು ಯಾರೋ ಹಿಂದೆ.
ತಂದು ರಸಭಂಗವನು. ತಿರುಗಿದರೆ ದೊಂದಿಬೆಳ-
ಕಲ್ಲಿ ಕಾಣುತ್ತಾನೆ ತಾನು ಕೂಡ ಒಂದು
ಉರಿಪಂಜು ಎನ್ನುವಂತೆ, ಹೊಳೆವ ಕಿರುಗತ್ತಿಯನು
ಸೆಳೆದು ಝಳಪಿಸುತಿರುವ ಅಂಗುಲೀಮಾಲನು.

೨೯
ಬುದ್ಧ ಹೇಳುತ್ತಾನೆ ಮೆಲುದನಿಯಲಾತನಿಗೆ:
‘ನಾನು ನಿಂತಿದ್ದೇನೆ. ನಿಲ್ಲದಿರುವವ ನೀನೆ!
ಜೀವ ಹಿಂಸೆಗಳಿಂದ ದೂರ ನಿಂತಿದ್ದೇನೆ.
ಭಯದೆದುರು ನಿರ್ಭಯದ ಹಾಗೆ ನಿಂತಿದ್ದೇನೆ
ಸಖ್ಯಕಾರುಣ್ಯವಾಧರಿಸಿ ನಿಂತಿದ್ದೇನೆ.
ಶಾಂತಿಮಾರ್ಗಕೆ ತೋರು ಬೆರಳನ್ನು ತೋರುತ್ತ
ನಿಂತಿರುವೆ. ತೆಗೆದುಕೋ ನನ್ನ ಈ ಬೆರಳನ್ನು.
ದಿಕ್ಸೂಚಿಯಾಗಿ ತೋರಲಿ ಶಾಂತಿಮಾರ್ಗವನು’.
ಒಮ್ಮೆ ಕಂಪಿಸುವುದು ಮೈ! ಇಳಿವುದೆತ್ತಿದ ಕೈ!
ಬುದ್ಧ ಕಣ್ಣಲ್ಲಿ ಕಣ್ಣಿಟ್ಟು ಬರುವನು ಸನಿಹ.
ಒಂದೊಂದೆ ಹೆಜ್ಜೆ ಊರುತ್ತ ಮೆಲ್ನೆಡೆಯಲ್ಲಿ.
ಧಿಗ್ಗೆಂಬ ಬೆಳಕು ಆ ಕೊಲೆಗಡುಕನೆದೆಯಲ್ಲಿ.
ಎದೆಯಾಳದಲ್ಲಿ ಜುಳುಜುಳು ಏನೊ ಹರಿದಂತೆ;
ಯಾವ ಜನ್ಮದ ತಾಯಿಯೋ ಕಣ್ಣು ತೆರೆದಂತೆ.

೩೦
ಹೆಡೆ ಮುದುಡುವುದು ನಾಗ ಕೇತಕೀ ಬನದಲ್ಲಿ.
ನಂದುವುದು ಕಿಚ್ಚು ಸುರಿಸುರಿವ ಹಾಲ್ಬೆಳಕಲ್ಲಿ.
ಇರುಳ ಕಡಲಲಿ ತೇಲುವುದು ಬೆಳಕಿನ ಹಡಗು.
ಬೆರಳು ತೋರಿತು ದಿಕ್ಕ, ದಿಕ್ಕೆಟ್ಟವಗೆ ಕಡೆಗು.
ಏನೊ ತಳಮಳ; ಏಕೊ ಕಣ್ಣಿರು; ಕರುಳರಿವು.
ಬಾಗಿತ್ತು ಒಡಲು ಕಡಲಲೆಯಂತೆ ಗಿರಿಯೆದುರು.
ಹೆಗಲ ಹಿಡಿದೆತ್ತಿದನು ಅಂಗುಲೀಮಾಲನನು.
ಚಾಚಿದನು ಪೂರ್ವಗಿರಿಯತ್ತ ತೋರ್ಬೆರಳನ್ನು.
ಕೆಂಪಾಗುತಿದೆ ಪೂರ್ವ ದಿಕ್ಕು. ಹಕ್ಕಿಗಳೀಗ
ರೆಕ್ಕೆ ಕೊಡುವುತ್ತ ಇವೆ. ಕಾಡಲೊಮ್ಮೆಗೆ ಸಾವಿ
ರಾರು ಕೊರಳರಳುತಿವೆ , ಬಗೆಬಗೆಯ ಚಿಲಿಮಿಲಿಯ
ಇನಿದನಿಯ ಹನಿಮಳೆಯು ಶುರುವಾಗುತಿದೆ ಈಗ.
ಮುಂದೆ ಗುರು. ಹಿಂದೆ ನಡೆದಿರುವನಂಗುಲಿಮಾಲ.
ಹೋಲುತ್ತ, ದೀಪವನು ಹಿಂಬಾಲಿಸುವ ನೆರಳ.

೩೧
ರವಿವಾರದಂದು ಮುಂಜಾನೆ ಉಪಸಂಪದ.
ಅಂಗುಲೀಮಾಲ ಗುರುವಿಂದ ದೀಕ್ಷಿತನಾಗಿ
ಭಿಕ್ಕುವಾಗುವ ದಿವಸ. ನಂಬಲಾರರು ಮಂದಿ
ಇಂಥ ಪರಿವರ್ತನೆಯ! ತಲೆಯನ್ನ ಬೋಳಿಸಿ,
ಅಗ್ನಿವರ್ಣದ ಚೀವರವನ್ನು ಧರಿಸಿರುವ
ಈತನೇ ಈವರೆಗು ಕೊಲೆಸುಲಿಗೆಯಲಿ ತೊಡಗಿ
ಅಂಗುಲೀಮಾಲೆಯನು ಧರಿಸಿದ್ದ ಪಾತಕಿ?
ಕಿಕ್ಕಿರಿದ ಜನರು ಅಚ್ಚರಿಯಿಂದ ನೋಡುವರು.
ಬುದ್ಧಗುರು ಬೋಧಿಸುತ್ತಿದ್ದಾನೆ ಆತನಿಗೆ
ಪಂಚಶೀಲದ ಐದು ಸಂಕಲ್ಪಸೂತ್ರಗಳ.
ದೊರೆ ಪಸೇನದಿ ಕೂಡ ಸಾಕ್ಷಿ ಉಪಸಂಪದಕೆ.
ಸಭೆಯಲ್ಲಿ ಗಟ್ಟಿ ಉಸಿರಾಟ ಕೇಳೀತೆನ್ನು-
ವಂಥ ನೀರವ ಮೌನ. ಕಾರುಣ್ಯ ಸೂಸುತ್ತ
ಅಮಿತಾಭ ಹೇಳುವನು ಪಂಚಶೀಲದ ಸುತ್ತ.

೩೨
ಸ್ವೀಕರಿಸುವೆನು ನಾನು ಜೀ
ಹತ್ಯಾವಿರತಿ
‘ಸ್ವೀಕರಿಸುವೆನು ನಾನು ಜೀವಹತ್ಯಾ ವಿರತಿ.’
ಕಳವು ಮಾಡೆನು ಇನ್ನು.‘ಕಳವು ಮಾಡೆನು ಇನ್ನು.’
ವ್ಯಭಿಚಾರ ಮಾಡೆನು.‘ವ್ಯಭಿಚಾರ ಮಾಡೆನು.’
ಅನೃತವ ನುಡಿಯೆನು. ‘ಅನೃತವ ನುಡಿಯೆನು.’
ಮತ್ತು ಬರಿಸುವ ವಸ್ತುಗಳನು ಸ್ವೀಕರಿಸೆನು.
‘ಮತ್ತು ಬರಿಸುವ ವಸ್ತುಗಳನು ಸ್ವೀಕರಿಸೆನು.’
ಅಸ್ತು!ಅಸ್ತೂ! ಎಂದು ನುಡಿದರು ಸಮಸ್ತರೂ.
ಹರಸಿದನು ಅಮಿತಾಭ ಹೊಸ ಭಿಕ್ಕುವನು ಕಣ್ಣಿ-
ನಲ್ಲಿ ತುಳುಕುತ್ತಿರಲು ಬೆಳಕು. ಪಸೇನದಿಯಾಗ
ಎದ್ದು ಬುದ್ಧನ ದಿವ್ಯ ಚರಣಕ್ಕೆ ನಮಿಸುವನು.
ಅಭಿನಂದಿಸುವನು ಈಗ ಭಿಕ್ಕುವಾದವನನ್ನು.
ಶಿಲೆಯು ಕರಗದೆ ಹೇಳಿ ಚಂದ್ರಿಕೆಯ ವರ್ಷಕ್ಕೆ?
ಎದೆಯ ಹೂ ಅರಳದೇ ರವಿಯ ಕರಸ್ಪರ್ಶಕ್ಕೆ?

೩೩
ಹೀಗೆ ಮುಟ್ಟಿದ್ದೆಲ್ಲ ಜೀವ ತಳೆಯುವುದಿಲ್ಲ.
ಜೀವವಿರಬೇಕು ಕೈಯಲ್ಲಿ. ಮುಟ್ಟುವ ಹಿಂದೆ
ಪ್ರೀತಿ ಮಡುಗಟ್ಟಿ ಕಳವಳಿಸುತ್ತ ಇರಬೇಕು.
ಮುಟ್ಟಿದರೆ ಸಾಕು ಮೇಲೆದ್ದು ನಿಲುವ ಉಮೇದು
ಪಾತ್ರಕ್ಕು ಇರಬೇಕು. ಕಣ್ಗುರುಡಿನಿಂದಲೋ
ಕಾಲ್ಜಾರಿಯೋ ಅಕಸ್ಮಾತ್ತು ಮುಟ್ಟುವುದೊಂದು
ಮುಟ್ಟೆ? ಅಂತಃಕರಣವಿಟ್ಟು ಅಕ್ಕರೆಯಿಂದ
ಮುಟ್ಟುವುದೆ ಮಾನವತೆ. ಹೊಲೆಮಡಿಗೆ ಹಿಡಿಮದ್ದು.
ಆಗಸದ ಹೊಂಗಿರಣ ಮಣ್ಣ ಮುಟ್ಟಿದ ಹಾಗೆ.
ಉರಿವ ದೀಪವು ಬತ್ತಿಯನ್ನು ಮುಟ್ಟಿದ ಹಾಗೆ.
ನಿಂತ ಗಿರಿ ನಿಲ್ಲದಿಹ ಮುಗಿಲ ಮುಟ್ಟಿದ ಹಾಗೆ.
ಮುಂಗಿರಣ ಬಂದು ತಾವರೆಯ ಮುಟ್ಟಿದ ಹಾಗೆ.
ಶ್ರುತಿಗೊಂಡ ವೀಣೆಯನು ಬೆರಳು ಮುಟ್ಟಿದ ಹಾಗೆ
ಕೊಲೆಗಡುಕನನ್ನು ಕಾರುಣ್ಯ ಮುಟ್ಟಿದ ಹಾಗೆ.

೩೪
ಪ್ರಾಪ್ತಿಯೂ ಇರಬೇಕು. ಬುದ್ಧನೊಂದಿಗೆ ಆಡಿ
ಬೆಳೆದು ಮುಪ್ಪಿಗೆ ಬಂದ ದೇವದತ್ತನ ನೋಡಿ!
ಬುದ್ಧನೊಡನಿದ್ದರೂ ಬುದ್ಧಿ ಬದಲಾಗಿಲ್ಲ.
ಕಣ್ಣುಕುಕ್ಕಿದೆ ಬುದ್ಧನ ಖ್ಯಾತಿ ಗೌರವ.
ಇರುಳು ಬಂದನು ಬುದ್ಧನಡಿಗೆ ತಾನೊಬ್ಬನೆ.
ಇನ್ನೆಷ್ಟು ಕಾಲ ಬಿಡುವಿರದೆ ನೀ ದುಡಿಯುವೆ?
ವಿಶ್ರಮಿಸು. ಬಿಟ್ಟುಕೊಡು ಪೀಠವನ್ನನ್ಯರಿಗೆ.
ನೆನಪಾಯಿತಾಗ ಬುದ್ಧನಿಗೆ ಯಾರೋ ಹಿಂದೆ
ಹೇಳಿದ್ದು ಈ ಮಾತು! ಯಾರು? ಮಾರನೆ? ಸಂಘ
ದಿನದಿನವು ಅಡ್ಡ ಹಾದಿಯ ಹಿಡಿದು ನಡೆದಿದೆ!
ಕೊಲೆಗಡುಕರೂ ಭಿಕ್ಕುವಾಗುವರು ಸಂಘದಲಿ.
ರೋಸಿಹೋಗಿದ್ದೇನೆ. ಬೇರೊಂದು ಸಂಘವನು-
ಕಟ್ಟು ಎನ್ನುತ್ತಾರೆ ಆಪ್ತ ಶಿಷ್ಯರು ನನಗೆ.
ಬುದ್ಧನುತ್ತರ ಕೇವಲ ಒಂದು ಮುಗುಳು ನಗೆ.

೩೫
ದುರ್ದಾನ ತೆಗೆದುಕೊಂಡಂತೆ ಹೋಗುತ್ತಾನೆ
ಚೀವರವ ಕೊಡಹುತ್ತ ಆ ದೇವದತ್ತನು!
ಆಗಲೇ ಬಂದದ್ದು ಆನಂದ. ಮುಖದಲ್ಲಿ
ದುಗುಡ ತುಂಬಿದೆ. ಕಣ್ಣಿನಂಚಲ್ಲಿ ಕಂಬನಿ.
ಏನು ಎನುವಂತೆ ಆನಂದನನು ನೋಡುವನು
ಲೋಕಗುರು. ಆನಂದ ಹೇಳುವನು: ಭಗವಂತ
ಕಪಿಲವಸ್ತುವಿನಿಂದ ವಾರ್ತೆ ಬಂದಿದೆ ಈಗ.
ತಂದೆ ಮಲಗಿದ್ದಾನೆ. ಸಾವೀಗ ಸನ್ನಿಹಿತ.
ನಿನ್ನ ಕಾಣುವ ಕೊನೆಯ ಆಸೆ ಹೆತ್ತಾತನಿಗೆ.
ಹಿಡಿಯುವನು ಆಪ್ತ ಶಿಷ್ಯನ ಹಸ್ತವನು ಬುದ್ಧ.
ಉತ್ಪನ್ನ ಹೊತ್ತು ತರುವುದು ತನ್ನ ಮಿತ್ತನ್ನ.
ಬಾ ಎಂಬ ಕರೆಗೆ ಓಗೊಡದೆ ದಾರಿಯೆ ಇಲ್ಲ.
ನಸುಕಿನಲ್ಲೇ ಹೊರಡಬೇಕು ಹುಟ್ಟೂರಿಗೆ
ಪಯಣಕ್ಕೆ ಅಣಿಮಾಡು ಎಂದನಾನಂದಗೆ.

೩೬
ಕಪಿಲವಸ್ತುವಿಗೆ ಬಂದಾಗ ಅರಮನೆಯಲ್ಲಿ
ಶೋಕ ಆವರಿಸಿತ್ತು. ಬುದ್ಧನನು ನೋಡಲೇ
ಮುಚ್ಚಿದ್ದ ಕಣ್ಣುಗಳು ಮೆಲ್ಲಗರಳುತ್ತಾವೆ.
ಮತ್ತೆ ಮುಚ್ಚುತ್ತಾವೆ ತೆರೆಬಿದ್ದಹಾಗೆ ಆ-
ವರೆಗೆ ತಡೆಯಿರದೆ ನಡೆದಿದ್ದ ಬಾಳಾಟಕ್ಕೆ.
ತಾಯಿ ಗೌತಮಿ ತುಟಿಯ ಕಚ್ಚಿ ಸಹಿಸುತ್ತಾಳೆ
ದುಃಖವನು. ಸೊಸೆ ಅವಳ ಹೆಗಲನಮುಕುತ್ತಾಳೆ.
ಕೊಳದ ನೀರಿಗೆ ಅಲೆಗಳಿಲ್ಲ ಎನ್ನುವ ಹಾಗೆ
ಕಾಣುತಿವೆ ಆಗ ತನ್ನಲ್ಲಿ ತಾನೇ ಮುಳುಗಿ
ಧ್ಯಾನಸ್ಥವಾದಂತೆ ಲೋಕಗುರುವಿನ ಕಣ್ಣು.
ಬರುವವರು ಬಂದು ಅಂತಿಮ ನಮನ ಸಲಿಸುವರು.
ಗಾಳಿಯಲಿ ಕರಗುವುದು ಅಗರುಬತ್ತಿಯ ಧೂಪ
ಬಯಲಲ್ಲಿ ಏನನೋ ಬರೆಯುತ್ತ ಇರುವಂತೆ;
ಬರೆದದ್ದ ಕೈಯಾರೆ ಅಳಿಸುತ್ತ ಇರುವಂತೆ.

೩೭
ಬುದ್ಧ ರಾಜಗೃಹಕೆ ಹೊರಟಾಗ ಗೌತಮಿಯು
ಹೇಳುವಳು: ಭಂತೆ ಈ ಲೌಕಿಕವು ಸಾಕಿನ್ನು.
ಭಿಕ್ಕು ಪದವಿಯ ನೀಡಿ ಅನುಗ್ರಹಿಸು ನನ್ನನ್ನು.
ಹೆತ್ತ ತಂದೆಯ ಹಾಗೆ ಇದ್ದ ದೊರೆ ಅಳಿದನು.
ಅತ್ತೆ ಭಿಕ್ಕುಣಿಯಾಗಲಿಕ್ಕೆ ಹೊರಟಿದ್ದಾಳೆ.
ಅನುಗ್ರಹಿಸು ನನಗು ಆ ಪರಮ ಶಾಂತಿಯ ನೆಲೆ.
ಕರುಣೆಯಿಡು ಕಾರುಣ್ಯ ಮೂರ್ತಿ. ಈ ತಾಯಿಯರು
ಅರಹಂತರಾಗಲರ್ಹತೆಯ ಪಡೆದಿದ್ದಾರೆ-
ಪರಿಶೀಲಿಸಿವರ ಬೇಡಿಕೆಯ ಎನ್ನುತ್ತಾನೆ
ಪ್ರಿಯ ಶಿಷ್ಯನಾದ ಆನಂದ ಕಂಬನಿ ತಂದು.
ಅರೆಗಳಿಗೆ ಮೌನತಾಳುವನಾಗ ಅಮಿತಾಭ.
ಅರೆ ಆಯುವಾಗುವುದು ಧರ್ಮ ಹೆಮ್ಮಕ್ಕಳನು
ಭಿಕ್ಕುಸಂಘಕ್ಕೆ ಸೇರಿಸಲು. ಏನನ್ನುವೆ?
ಅರ್ಧ ಒಳಗೊಳ್ಳುವುದು ಅರ್ಧವಾಗೆನ್ನುವೆನು.

೩೮
ಅಸ್ತು ಎಂದನು ಬುದ್ಧ ಭಗವಂತ ಶೂನ್ಯವನು
ದಿಟ್ಟಿಸುತ. ಶರಣಾದರಿಂತು ಆ ತಾಯಿಯರು
ಬುದ್ಧನಿಗೆ, ಧರ್ಮಕ್ಕೆ, ಸಂಘಕ್ಕೆ. ಅಲೆಯಡಗಿ
ಶಾಂತವಾಯಿತು ಕಡಲು. ಒಂದು ಬೆಳಕಿನ ಹಡಗು
ತೇಲಿತ್ತು ಕ್ಷಿತಿಜದಲಿ ಹೊನ್ನ ಬೆಳಕಿನ ಸಂಜೆ.
ಮಿಡಿಯತೊಡಗಿವೆ ಮುಸುಕ ಹೊದ್ದು, ಮೂಲೆಯಲಿದ್ದ,
ಹದವಾಗಿ ಶ್ರುತಿಗೊಂಡ ವೀಣೆಗಳು. ಆನಂದ
ಒಲವು ತುಂಬಿದ ಕಣ್ಣಿನಲ್ಲಿ ನೋಡುತ್ತಾನೆ.
ಆನಂದಬಾಷ್ಪ ಧಾರಾಕಾರ ಸುರಿಸುತ್ತ,
ಅರೆಗೆ ಅರೆ ಕೂಡಿ ಹೆರೆ ಪೂರ್ಣವಾಯಿತು ಎನುತ,
ಸಾಷ್ಟಾಂಗವೆರಗುವನು ಬುದ್ಧ ಶ್ರೀ ಚರಣಕೆ
ಮುಡಿಯನಿರಿಸುತ. ಯಶೋಧರೆ, ತಾಯಿ ಗೌತಮಿ
ಕಣ್ಣಲ್ಲಿಯೇ ತೆರೆದು ತೋರುವರು ಸಂತೃಪ್ತಿ.
ಯಾವುದೋ ಹಕ್ಕಿ ಉಲಿಯುವುದು ಸ್ವಸ್ತಿ-ಸ್ವಸ್ತಿ.

೩೯
ನಡುಹಗಲ ಸಮಯ. ಆಗಷ್ಟೆ ಹತ್ತಿದೆ ಕಣ್ಣು.
ಯಾರೊ ಎತ್ತಿದ ಸ್ವರದಲಳುವ ದನಿ ಕೇಳಿದ್ದೆ
ಥಟ್ಟನೆಚ್ಚರವಾಗಿ ಕಣ್ತೆರೆಯುವನು ಬುದ್ಧ.
ಆನಂದ, ನೋಡು! ಯಾರೋ ಪಾಪ ಅಳುತಿಹರು.
ಕರೆದು ತಾ ಒಳಗವರ. ಆನಂದ ಹೇಳುವನು:
ಕೂಸು ತೀರಿದೆ! ಕಿಸಾಗೌತಮಿಯು ಕೂಸನ್ನು
ಹೊತ್ತು ತಂದಿದ್ದಾಳೆ. ಬುದ್ಧಮಲಗಿದ ಕೂಸ
ಎಚ್ಚರಿಸಬಹುದೆಂದು. ಛೆ! ಎಂದು ನೊಂದು ಬು-
ದ್ಧನು ಎದ್ದು ಹೊರಬಂದು ನೋಡುವನು ಮಗುವನ್ನು.
ಮುಟ್ಟಿದರೆ ಒಡಲು ಬಿಸಿಯಿಲ್ಲ. ಉಸಿರಾಟವೂ
ನಿಂತಿಹುದು. ಬಿಳಿಚಿಕೊಂಡಿದೆ ತುಟಿ. ಅರೆ ತೆರೆದ
ಕಣ್ಣಲ್ಲಿ ಬೆಳಕಿಲ್ಲ. ‘ದಯಮಾಡಿ ಎಚ್ಚರಿಸು!
ಮಲಗಿದ್ದ ಕೂಸು ಮೈಮರೆತು ಮಲಗಿರುವುದು!
ಪುಣ್ಯಾತ್ಮ ನೀನು ಮುಟ್ಟಿದರೆ ಕಣ್ತೆರೆಯುವುದು.’

೪೦
ಕೂಸು ತೀರಿದೆ ಮಗಳೆ. ಸಾವೆ ಇಲ್ಲದ ಮನೆಯ
ಸಾಸಿವೆಯ ತಂದರೆ, ಕೂಸು ಕಣ್ತೆರೆದೀತು!
ಮಗುವನಲ್ಲೇ ಇರಿಸಿ ತಾಯಿ ಓಡುತ್ತಾಳೆ!
ಸಾವು ಆಗದ ಮನೆಯೆ ಇಲ್ಲ ಆ ಊರಲ್ಲಿ!
ಹೋಗುವಾಗಿದ್ದ ಬಿರುಸಿಲ್ಲವಳ ನಡೆಯಲಿ.
ಕಾಲನೆಳೆಯುತ್ತ ಬರುವಳು ತಾಯಿ ಗೌತಮಿ.
ಬುದ್ಧಚರಣದಲಿರಿಸಿ ಕೂಸ ಕಣ್ಣೀರ ಮಳೆ
ಕರೆಯುವಳು. ಸುಗತನಾಕೆಯ ಮುಡಿಯ ಮೃದುವಾಗಿ
ಸವರುವನು: ಹುಟ್ಟಿದವರೆಲ್ಲ ಸಾಯಲೆ ಬೇಕು.
ಹುಟ್ಟುಸಾವಿನ ನಿತ್ಯ ನಾಟಕವ ತೋರುತಿದೆ
ಪ್ರಕೃತಿ. ಹೂವರಳಿ ಬಾಡುವುದು, ಈ ಮಣ್ಣಲ್ಲಿ.
ರವಿ ಮೂಡಿ ಮುಳುಗುವನು ಪ್ರತ್ಯಿನಿತ್ಯ ಬಾನಲ್ಲಿ.
ಯಾರಿಗೂ ತಪ್ಪಿಸಲು ಆಗದಾ ಮೃತ್ಯುವನು
ಅಪ್ಪಿಕೋ! ಒಪ್ಪಿ ಈ ಬಾಳ ಕ್ಷಣಿಕತೆಯನ್ನು.

೪೧
ಬುದ್ಧ ಸ್ಪರ್ಶವೊ, ಅವನ ಸಾಂತ್ವನದ ನುಡಿಗಳೊ
ಅನಿವಾರ್ಯತೆಯ ಅರಿವು ಮೂಡಿಸಿತು ಮನದಲ್ಲಿ.
ತಾಯಿ ಗೌತಮಿ ಕೂಸ ಬಂಧುಗಳ ಕೈಗಿಟ್ಟು,
ಒಪ್ಪಮಾಡಿರಿ ಎಂದು ತಡೆ ತಡೆದು ಆಡಿದಳು.
ಆವತ್ತಿನಿಂದ ಗೌತಮಿಯು ಪ್ರತಿ ಸಂಜೆಯೂ
ಕೊನೆಯ ಸಾಲಲಿ ಕೂತು ನೋಡುವಳು ಬುದ್ಧನನು.
ಕೇಳುವಳು ತಣಿವು ನೀಡುವ ಅವನ ಮಾತುಗಳ.
‘ಮಾತಿಗಿದೆ ದುಃಖವನು ಶಮನಗೊಳಿಸುವ ಶಕ್ತಿ.
ಸತ್ಯ ಮತ್ತೂ ದಯೆಯ ಮಿಲನಗೊಳಿಸುವ ಶಕ್ತಿ.
ಮಾತಿಗಿದೆ ಜಗವನ್ನೆ ಪರಿವರ್ತಿಸುವ ಶಕ್ತಿ.’
ಇದು ಬುದ್ಧವಾಣಿ ಎನ್ನುತ್ತಾನೆ ಆನಂದ,
ಶ್ವೇತವಸ್ತ್ರದಲಿರುವ ಗೌತಮಿಯ ನೋಡುತ್ತ.
ಬಾಳು ಬದುಕುವುದಕ್ಕೆ; ಸಾವುಂಟು ಸಾಯಲು.
ಹುಟ್ಟು ಸಾವಿವೆ ಬಂದ ಹಾಗೆ ಬಾ ಎನ್ನಲು.

೪೨
ಸಾರಿಪುತ್ರನ ಜೊತೆಗೆ ಮೊಗ್ಗಲಾಯನ ಬಂದು
ಕಾಣುವನು ಬುದ್ಧನನು: ದೇವದತ್ತನು ಕೊನೆಗು
ಹಿಡಿದ ಹಠ ಬಿಡಲಿಲ್ಲ. ಉಜ್ಜಯಿನಿ ಮತ್ತು ವೈ
ಶಾಲಿಗಳ ಕಡೆಯಿಂದ ಬಂದ ಹೊಸ ಭಿಕ್ಕುಗಳ
ತಲೆಕೆಡಿಸಿ ಐನೂರು ಭಿಕ್ಕುಗಳ ಜೊತೆಮಾಡಿ-
ಕೊಂಡು ದೂರದ ಗಯಾಸೀನಕ್ಕೆ ಹೋಗಿಹನು.
‘ಭಿಕ್ಕುಗಳು ಹೊಸಬರು. ತತ್ವ ಅರಿತವರಲ್ಲ.
ನೀವೆ ಅಲ್ಲಿಗೆ ಹೋಗಿ ಮನವೊಲಿಸಿ ಕರೆತನ್ನಿ’-
ಎನ್ನುವನು ಅಮಿತಾಭ ಅನುಕಂಪ ಸ್ವರದಲ್ಲಿ.
ಹಾಗೆ ಮಾಡುತ್ತೇವೆ ಎಂದು ಆ ಭಿಕ್ಕುಗಳು
ಹೋಗುವರು ದೇವದತ್ತನ ಗಯಾಸೀನಕ್ಕೆ.
ದೂರದಿಂದವರ ನೋಡಿದ ದುಷ್ಟ ಹೇಳುವನು
ಶಿಷ್ಯರಿಗೆ:‘ನೋಡಿ! ಬುದ್ಧನ ಬಿಟ್ಟು ಬರುವವರ!’
ಹೇಗೆ ಅರಿತಾರು ಶತ ಮೂರ್ಖ ಜನ ಬಲ್ಲವರ?

೪೩
ದೇವದತ್ತನು ನಂಬಿದನು: ಬುದ್ಧ ಭಿಕ್ಕುಗಳು
ತನ್ನ ಸಂಘವ ಸೇರಲೆಂದೆ ಬಂದಿದ್ದಾರೆ!
ಮಿತ್ರ ಕೋಕಾಲಿಕನು ಹೇಳುವನು ಅವನಿಗೆ:
ಹಾಗೆ ಭಾವಿಸಬೇಡ! ತಂತ್ರವಿದೆ ಇದರಲ್ಲಿ.
ದೇದತ್ತನಿಗೊ ವಿಶ್ವಾಸ. ಯಾವುದರಲ್ಲಿ
ಕಮ್ಮಿ ಗೌತಮಗಿಂತ ತಾನು!? ಬಂದವರನ್ನು
ಸ್ವಾಗತಿಸಿ ಕರೆದು ಕೂಡಿಸಿದನು ವೇದಿಕೆ ಮೇಲೆ.
ತನ್ನ ಹೊಸಧರ್ಮವನು ಕುರಿತು ಮಾತಾಡಿದನು
ಗಂಟೆಗಟ್ಟಲೆ! ಬಳಿಕ ಸಾರಿಪುತ್ರನ ನೋಡಿ
ಸಂಜೆಯಿಂದಲು ಮಾತನಾಡಿ ದಣಿದಿದ್ದೇನೆ.
ನೀವೀಗ ಹೊಸ ಸಂಘವನು ಕುರಿತು ಮಾತಾಡಿ!
ಎನ್ನುತ್ತ ಬುದ್ಧ ಹೇಗೋ ಹಾಗೆ ಮಲಗಿದನು!
ಬಲಮಗ್ಗುಲಾಗಿ ಗೌತಮನದೇ ಶೈಲಿಯಲಿ!!
ನಿದ್ದೆ ಹತ್ತಿತು ಪಾಪ! ಯಾವುದೊ ಮಾಯೆಯಲಿ!

೪೪
ಎಷ್ಟೊ ಹೊತ್ತಿನ ಮೇಲೆ ಥಟ್ಟನೆಚ್ಚರ. ಕಣ್ಣು
ತೆರೆದು ನೋಡುತ್ತಾನೆ. ಖಾಲಿಯಾಗಿದೆ ಸಭೆ!
ಕಾಣದಾಗಿದೆ ಒಂದು ನರಪಿಳ್ಳೆಯೂ ಕೂಡ!
ಎದ್ದು ದುಡುದುಡು ಓಡಿದ ಹೊದ್ದ ಚೀವರವ

ನೇವರಿಸಿಕೊಳುತ…ಕೋಕಾಲಿಕಾ ಎನ್ನುತ್ತ!
ಉಳಿದ ಭಿಕ್ಕುಗಳೊಡನೆ ಕೋಕಾಲಿಕನು ಕೂಡ
ಮಾಯ! ಹೊಸ ಭಿಕ್ಕುಗಳು ಗಂಟು ಮೂಟೆ ಸಮೇತ
ಮರಳಿಯಾಗಿದೆ ರಾಹಗೃಹಕೆ! ಮಗಧದ ರಾಜ
ಕೊಟ್ಟಿದ್ದ ಭವ್ಯವಾದಂಥ ಆ ಭವನದಲಿ
ನೀನೆ ಅನ್ನೋರಿಲ್ಲ. ಬಾಗಿಲಲಿ ಮುದಿ ನಾಯಿ
ಮಲಗಿಹುದು ತನ್ನ ಬಾಲವತಾನೆ ಮುದ್ದಿಸುತ!
ಅಲ್ಲೆ ಜಗುಲಿಯ ಮೇಲೆ ಕುಸಿದ! ತಳಮಳಿಸುತ್ತ!
ಇದಕೆ ತಕ್ಕದ್ದನ್ನ ಮಾಡುವೆನು ಎನ್ನುತ್ತ!
ಹಾವು ಬುಸುಗುಟ್ಟುತಿದೆ ಹುತ್ತವನು ಬಡಿಯುತ್ತ.

೪೫
ವೇಣುವನದಲಿ ಬುದ್ಧ ಈಗ ನೆಲೆಸಿದ್ದಾನೆ.
ಗೃಧ್ರ ಕೂಟದ ಅಡಿಯ ತಪ್ಪಲಲಿ ಭಾರಿಸಭೆ!
ವೈಶಾಖ ಪೂರ್ಣಿಮೆಯ ಆಚರಣೆ! ಅಮಿತಾಭ
ಬರುವುದನು ಕಾಯುತ್ತ ಕೂತಿರಲು ಭಿಕ್ಕುಗಳು
ಬಂದೆಬಿಟ್ಟನು ಬುದ್ಧ ಒಂದು ಕ್ಷಣ ಹಿಂಚಿಲ್ಲ
ಒಂದು ಕ್ಷಣ ಮುಂಚಿಲ್ಲ. ಬುದ್ಧನಿಗೆ ಜಯವೆಂದು
ಮೊರೆಯುವುದು ಭಿಕ್ಕು ಸಮುದಾಯ. ಸಾರೀಪುತ್ರ
ನಿಲ್ಲುವನು ಗುರುವನ್ನು ಸ್ವಾಗತಿಸೆ! ಚಕ್ಕೆ ಮೈ
ವೃದ್ಧ ಗುರು ನಸುನಗುತ ಬಂದ ವೇದಿಕೆಯತ್ತ.
ಶರಣು ಗುರು ಬುದ್ಧನಿಗೆ! ಧರ್ಮಕ್ಕೆ! ಸಂಘಕ್ಕೆ!
ಒಕ್ಕೊರಲಿನಿಂದ ಪಠಿಸುವರು ಭಿಕ್ಕುಗಳೆದ್ದು.
ಮೊಗ್ಗಲಾಯನ ಎರಡು ಮಾತು ಆಡುತ್ತಾನೆ.
ಈಗ ಬುದ್ಧನ ಸರದಿ. ಭಿಕ್ಕುಗಳೆ ಈವತ್ತು
ಇರುಳೆದೆಯ ಸೇರುವುದು ಬೆಳ್ದಿಂಗಳಿನ ಬಿತ್ತು.

೪೬
ಹೀಗೆ ನುಡಿಯಲು ತೊಡಗಿ ನಿಮಿಷವೂ ಆಗಿಲ್ಲ!
ಒಂದು ಹೆಬ್ಬಂಡೆ ಗುಡುಗುಡು ಗುಡುಗಿನಂತುರುಳಿ
ಬಂತು ಬಂತಾ ಬಯಲ ಸಭೆಯತ್ತ! ಭಿಕ್ಕುಗಳು
ಹಾ ಎಂದು ಕೂಗುವರು. ಓಡುವರು ಹೆಬ್ಬಂಡೆ
ಬರಲು ಸಭೆಯನೆ ತನ್ನ ಗುರಿಮಾಡಿಕೊಂಡಂತೆ.
ಇನ್ನೇನು ಬಂಡೆ ತಾಗಿತು ವೃದ್ಧ ಗುರುವಿಗೆ!
ಬುದ್ಧ ನೋಡುತ್ತಾನೆ ನಿಂತು ಸುಸ್ಥಿರವಾಗಿ.
ಮತ್ತೊಂದು ಬಂಡೆ ಎದುರಾದಂತೆ ಆ ಹೆಬ್ಬಂಡೆ
ಗುರಿಯ ಬದಲಿಸಿದಂತೆ ಉರುಳಿ ಹೋಯಿತು ಪಕ್ಕ!
ಕಾಲು ತರಚಿತು ಬಂಡೆ ಚೂರು ಛಟ್ಟನೆ ಸಿಡಿದು.
ಜೀವಕನು ಓಡೋಡಿ ಬಂದು ಗುರುವನ್ನೆತ್ತಿ
ಕರೆದೊಯ್ದ ವಿಶ್ರಾಂತಿ ಧಾಮಕ್ಕೆ. ಮೈಯಿಂದ
ಸುರಿದು ರಾಣಾರಕ್ತಮಯವಾಯ್ತು ಮೈಯೆಲ್ಲ!
ಕಣ್ಣೀರ ಕರೆಯುವರು ಬುದ್ಧ ಭಿಕ್ಕುಗಳೆಲ್ಲ.

೪೭
ಬಂಡೆ ಗುರಿತಪ್ಪಿ ಜೀವಂತ ಉಳಿದನು ಬುದ್ಧ.
ಗಾಯ ಮಾಯಲು ಹಲವು ತಿಂಗಳೇ ಬೇಕಾಯ್ತು.
ಬಂಡೆ ತಾನೇ ಉರುಳಿ ಬಿದ್ದಿಲ್ಲ. ಮೀಟುಗೋ
ಲಿಟ್ಟು ಸಡಲಿಸಿ ಅಡ್ಡ ಬಂಡೆಗಳ ಯಾವನೋ
ಬುದ್ಧ ಹತ್ಯೆಗೆ ನಡೆಸಿರುವಂಥ ಹುನ್ನಾರ
ಎಂಬುದರಿವಾಗಿ ನಡುನಡುಗುವರು ಭಿಕ್ಕುಗಳು.
ಆ ದೇವದತ್ತನದೆ ಈ ಸಂಚು? ಆನಂದ
ಗುರುವನೊಪ್ಪಿಸಿ ಜೇತವನಕೆ ಕರೆದೊಯ್ಯುವೆನು.
ದೇವದತ್ತ ಮತ್ತು ಬಿಂಬಿಸಾರನ ಪುತ್ರ
ಬುದ್ಧನನು ಹತ್ಯೆಮಾಡುವ ಯತ್ನದಲ್ಲಿರಲು
ವೇಣುವನ ವಾಸ್ತವ್ಯ ಹಿತವಲ್ಲ ಎನ್ನುವನು.
ಕಲ್ಲಿಗೂ ಕರುಣೆ ಎನ್ನುವನು ಬುದ್ಧ ನಗುತ್ತ.
ಹೀಗೆ ಹೇಗೋ ಉಳಿದ ಬುದ್ಧ ಹೇಳುತ್ತಾನೆ!
ಬರುವಾಗ ಬರಲಿ ಬಿಡಿ ಸಾವು ತನ್ನಿಂತಾನೆ!

೪೮
ಈಗ ಬಿಗಿ ಭದ್ರತೆಯು ಹೆಚ್ಚಾಗುವುದು ವೇಣು-
ವನಕೆ ಬರುವವರ ತಪಾಸಣೆ ಮಾಡಿ ಬಿಡುವರು!
ಬುದ್ಧ ಒಪ್ಪನು ಇದನು. ತನ್ನ ರಕ್ಷೆಗೆ ಬೇಡ
ಕಾವಲಿನ ಕಣ್ಣು ಎನ್ನುವನು! ಮೊದಲಿನ ಹಾಗೆ
ಒಬ್ಬನೇ ಮಲಗುವನು ಧ್ಯಾನ ಮಂದಿರದಲ್ಲಿ.
ಈಗ ಪ್ರತಿಯೊಬ್ಬರೂ ಹಂತಕರೆ ಎನಿಸುವುದು
ಸಾರಿಪುತ್ರ ಮತ್ತು ಮೊಗ್ಗಲಾಯನರಿಗೆ.
ಆನಂದ ನಿದ್ದೆ ಮಾಡದೆ ಧ್ಯಾನ ಮಂದಿರದ
ಜಗುಲಿಯಲಿ ಕಳೆವನಿರುಳನು ಕಣ್ಣು ಮುಚ್ಚದೆ.
ಏನಾದರೂ ಸರಿ! ತನ್ನ ದಿನಚರಿ ತಪ್ಪ
ದೆನ್ನುವನು ಗುರು. ಹಗಲು ಭಿಕ್ಷಕ್ಕೆ ಹೋಗುವನು,
ಆದುದಾಗಲಿ ಎಂಬ ದಿವ್ಯ ನಿರ್ಲಕ್ಷ್ಯದಲಿ.
ಕೇಡಿನಲಿ ಹುಡುಕುವುದು ಮಾನವ್ಯ ನನ್ನ ಗುರಿ!
ಮಾನವರಲರಿಸುವುದು ಕೇಡ! ಹೇಗಯ್ಯ ಸರಿ?!

೪೯
ವಿಶ್ವಾಸವಿರಲಿ ಮಾನವರೊಳ್ಳೆತನದಲ್ಲಿ
ಎನ್ನುವನು ಅಮಿತಾಭ ತನ್ನಾಪ್ತರೆದುರಲ್ಲಿ.
ಬೇಡವೇ ಬೇಡ ಬಿಡಿ. ಇದ್ದಷ್ಟು ದಿನ ನಾವು
ಬದುಕೋಣ ನಮ್ಮಂತೆ ಇರುವ ಮಂದಿಯ ನಂಬಿ.
ನಮ್ಮಂತೆಯೇ ಕಣ್ಣು ಕಣ್ಣೀರು ಉಳ್ಳವರು
ನೋಡೋಣ ಹೇಗೆ ಕೆಂಗಣ್ಣರಾಗುವರೆಂದು.
ಕೇಳಲಿಕ್ಕೇನೊ ಹಿತ . ಆಚರಣೆಗಿದು ಕಷ್ಟ.
ಎನ್ನುವನು ಆನಂದ ಸಾರಿಪುತ್ರನ ಎದುರು.
ವೈಶಾಲಿಯತ್ತ ಹೊರಡೋಣ ಎನ್ನುತ್ತಾನೆ
ಮೊಗ್ಗಲಾಯನನ ಕೈಹಿಡಿದು ಆ ಕಾಶ್ಯಪ.
ದಯಮಾಡಿ ಬುದ್ಧನೊಡನಿರಲು ಅನುಮತಿ ನೀಡು
ಬೇಡುವನು ಜಾಲಿನೀಭಿಕ್ಕು ಕಾಶ್ಯಪನನ್ನು.
ಒಟ್ಟಿನಲಿ ಯಾವುದೋ ಆತಂಕ; ತಳಮಳ.
ಹಿರಿಯ ಭಿಕ್ಕುಗಳಲ್ಲಿ ಎಂಥದೋ ಕಳವಳ.

೫೦
ಹಳೆಯ ಗಾಯವು ಪೂರ ಮಾಸಿಲ್ಲ. ಒಂದು ದಿನ
ಆನೆ ನುಗ್ಗಿತು ಎಂದು ಅರಚುವುರು ಭಿಕ್ಕುಗಳು.
ಹೇಗೆ ಬಂದಿತು ಇಂಥ ಮದ್ದಾನೆ ಚೈತ್ರಕ್ಕೆ?
ಮಾವುಟಿಗ ಮೇಲಿಲ್ಲ. ಯರೊ ಸರಪಳಿ ಕಳಚಿ
ಕುಡಿಸಿ ಮಾದಕ ದ್ರವ್ಯ ಅಟ್ಟಿರುವ ಹಾಗಿದೆ.
ಯಾರೊ ಇದು ದೊರೆಯ ಪಟ್ಟದ ಆನೆ ಎನ್ನುವರು!
ಇದು ನಲಾಗಿರಿ ಎನ್ನುವನು ಮತ್ತೆ ಇನ್ನೊಬ್ಬ
ಚೀವರವು ಬಿದ್ದರೂ ಲಕ್ಷಿಸದೆ ಓಡುತ್ತ.
ಧ್ಯಾನ ಮಂದಿರದಿಂದ ಹೊರಗೆ ಬರುವನು ಬುದ್ಧ.
ನೋಡುವನು ಘೀಂಕರಿಸಿ ಬರುವ ಮದಿಸಿದ ಗಜವ.
ಕಣ್ಣಲ್ಲಿ ಕಣ್ಣು. ಸೊಂಡಿಲ ಎತ್ತಿ ಮದ್ದಾನೆ
ಇಗ್ಗಾಲಿನಲ್ಲಿ ನಿಲ್ಲುವುದೊಂದು ಅರೆಗಳಿಗೆ.
ಆನಂದ ತಡೆದರೂ ಲಕ್ಷಿಸದೆ ಬುದ್ಧ ಮು-
ನ್ನಡಿಯಿಡುತ ಮದ್ದಾನೆಯತ್ತ ಬರುತಿರುವನು.

೫೧
‘ಮತ್ತೇರಿಸುವ ದ್ರವ್ಯ ಸ್ವೀಕರಿಸ ಬಾರದು’-
ಎಂದು ಆನೆಯ ಕೊರಳ ಗಂಟೆಯನು ಮಿಡಿಯುವನು!
ಎಂಥ ಸುಮಧುರ ನಾದವೆನ್ನುತ್ತ ಹೊಮ್ಮುತಿಹ
ಓಂಗೆ ಓಂ ಎಂದು ಮರು ನುಡಿಯುತ್ತ ಅಮಿತಾಭ
ತಂದ ಬೆಲ್ಲದ ಉಂಡೆ ಇರಿಸುವನು ಬಾಯಲ್ಲಿ.
ಆನೆ ಮಂಡಿಯನೂರಿ ಕೂರುವುದು. ಭಿಕ್ಕುಗಳು
ಬೆರಗಾಗಿ ನಿಲ್ಲುವರು ಅರೆಗಳಿಗೆ. ಸಮಣೇರ
ಒಮ್ಮೆಗೇ ಕೂಗುವನು ಬುದ್ಧಗುರುವಿಗೆ ಉಘೇ!
ಉಘೆ ಉಘೇ ಉಘೆ ಉಘೇ ಎನ್ನುವರು ಭಿಕ್ಕುಗಳು.
ಘೀಎಂದ ಆನೆಯು ಉಘೇ ಎನ್ನುವುದು ಈಗ.
ಕರವೆತ್ತಿ ಸುತ್ತಿ ಶರಣೆನ್ನುವುದು ಬುದ್ಧನಿಗೆ
ತನ್ನದೇ ನುಡಿಯಲ್ಲಿ. ಆಗ ಮಾವುಟ ಅಲ್ಲಿ-
ಗೋಡಿ ಬರುವನು ದಾರಿಯಲ್ಲಿ ಎದ್ದೂಬಿದ್ದು.
ಕಣ್ಣೀರ ಕರೆಯುವನು ಬುದ್ಧಚರಣಕೆ ಬಿದ್ದು.

೫೨
ಕಾಡುಗಿಚ್ಚಾಗಿ ಹಬ್ಬಿತು ಹೀಗೆ ಗುರುವನ್ನು
ಹತ್ಯೆ ಮಾಡುವ ಯತ್ನ ವೈಫಲ್ಯಗೊಂಡದ್ದು.
ಬೆರಾಗುವನು ದೊರೆ ಅಜಾತಶತ್ರುವು ಕೂಡ.
ಸಾಮಾನ್ಯನಲ್ಲ ಬುದ್ಧನು ಎಂಬ ಅರಿವಾಗಿ.
ಒಮ್ಮೆ ನಡುಗಿತು ಎದೆ. ಕಂಪಿಸಿತು ಕೈಕಾಲು.
ಬುದ್ಧನನು ಹತ್ಯೆಮಾಡುವ ಯತ್ನ ನಡೆದಿರುವ
ದುರ್ವಾರ್ತೆ ದೊರೆ ಪಸೇನದಿಯನ್ನು ಮುಟ್ಟಿತ್ತು.
ಬಿಂಬಿಸಾರನ ಸಾವು ಮೊದಲೆ ಕಲಕಿತ್ತವನ.
ಈಗ ಅರಮನೆಯಾನೆಯಿಂದ ಬುದ್ಧನ ಹತ್ಯೆ
ಯತ್ನ ನಡೆದಿದೆ. ಸೇನಾಪಡೆಯ ನುಗ್ಗಿಸಿ
ಮಗಧ ದೊರೆಯನು ಬಗ್ಗು ಬಡಿಯೆ ನಿಶ್ಚಯಿಸಿದ.
ಚತುರಂಗ ಬಲ ಹೊರಟಿತು ರಾಜಗೃಹದತ್ತ.

೫೩
ಏಕೊ ಗ್ರಹಚಾರವೇ ಸರಿಯಿಲ್ಲವೆನ್ನುತ್ತ
ಬಿಂಬಿಸಾರನ ಪುತ್ರ ಓಡಿಬಂದನು ವೇಣು

ವನದತ್ತ. ಬಂದು ಕಂಡನು ಬುದ್ಧಗುರುವನ್ನು.
ತಪ್ಪಾಗಿಹೋಗಿದೆ! ದಯಮಾಡಿ ಮನ್ನಿಸು.
ಹೇಗಾದರೂ ಮಾಡಿ ಯುದ್ಧವನು ತಪ್ಪಿಸು.
ಯಾರೊ ತಲೆತಿರುಕ ಹೇಳಿದ್ದ ನಂಬಿದೆ ನಾನು!
ನಿನ್ನ ತಾಗಿದ ಬಂಡೆ ಕರಗುವುದು. ಮದ್ದಾನೆ
ಮಂಡಿಯೂರುತ್ತದೆ! ನೀನು ವೈಶಾಲಿಗೆ
ಭಿಕ್ಕುಗಳ ಕಳಿಸಿ ನಿಲ್ಲಿಸು ಕ್ರೂರ ಕದನವ.
ಪ್ರಾಣವ್ಯಯ. ಶಕ್ತಿವ್ಯಯ. ಸರ್ವನಾಶದ ಭಯ.
ನಿನ್ನೊಂದು ನುಡಿಯಿಂದ ತಪ್ಪಬಹುದೀವತ್ತು
ದೂರಾಗಬಹುದು ಬಂದಿರುವ ಹಿರಿ ಆಪತ್ತು.
ಬುದ್ಧ ಕೈಹಿಡಿದೆತ್ತಿದ ಮಗಧ ದೊರೆಯನ್ನು.
ಆನಂದ ಹೋದ ಕಾಣಲು ಪಸೇನದಿಯನ್ನು.

೫೪
ಯುದ್ಧ ತಪ್ಪಿತು. ಪಸೇನದಿಯು ಬಂದನು ರಾಜ-
ಗೃಹಕೆ. ಬೇಡುತ್ತಾನೆ ಬುದ್ಧನನು ದಯಮಾಡಿ
ಬಾ ಎಂದು, ಶ್ರಾವಸ್ತಿ ನಗರಕ್ಕೆ. ಜೇತವನ
ಕಾಯುತ್ತ ಇದೆ ನಿನ್ನ ಆಗಮನವನೇ ಈಗ.
ಹಠಕೆ ಸೋಲುವನಲ್ಲ. ಸೋಲುವನು ಪ್ರೀತಿಗೆ.
ಬುದ್ಧ ಹೊರಟನು ಶ್ರಾವಸ್ತಿ ನಗರಕೆ ಆಗ.
ಮಗಧ ದೊರೆ ಶರಣಾಗುವನು ಬುದ್ಧ ಚರಣಕ್ಕೆ.
ತನ್ನ ರಾಣಿಯರೊಡನೆ ದೀಕ್ಷೆ ಸ್ವೀಕರಿಸುವನು.
ಬೀಳ್ಕೊಡೆಯ ದಿನ ನಲಾಗಿರಿಯ ಮಗಧದ ದೊರೆ
ಒಪ್ಪಿಸುತ್ತಾನೆ ಕಾಣಿಕೆಯಾಗಿ ಬುದ್ಧನಿಗೆ.
ಬುದ್ಧ ಹುಸಿ ನಗುತ ಹೇಳುತ್ತಾನೆ ಮಗಧನಿಗೆ
ಅರಸನಾನೆಗೆ ತಿರಿದ ಅರೆಗಾಸ ಮಜ್ಜಿಗೆಯೆ?
ಇರಲಿ ಪ್ರತಿನಿಧಿಯಾಗಿ ನನ್ನೀ ನಲಾಗಿರಿ!
ಎಂದು ಚೀವರವ ಹಾಕುವನದರ ಹೆಗಲಲಿ.

೫೫
ಜೇತವನದಲಿ ಬುದ್ಧ ಬಹುಕಾಲ ಉಳಿಯುವನು.
ಮೊದಲ ಕಸುವಿಲ್ಲ ಕಾಲುಗಳಲ್ಲಿ. ಕಣ್ಮಬ್ಬು.
ಕಿವಿಯು ಕೂಡಾ ಮಂದ. ಆನಂದ ಇನ್ನೊಮ್ಮೆ
ಎನ್ನುವನು. ಎಡಗಿವಿಯ ಬಳಿ ಬಾಗಿ ಮಾತಾಡು
ಅನ್ನುವನು. ಹೇಮಂತ ಋತು ಬಂತು. ಮರದಿಂದ
ಎಲೆಗಳುದುರುತ್ತಾವೆ ಸತತ. ಈ ಎಲೆ ಬೀಳ
ಕರುಣೆ ತುಂಬಿದ ಕಣ್ಣಿನಿಂದ ನೋಡುತ್ತಾನೆ.
ನೆನಪಾಗುವರು ತನ್ನೊಡನಿದ್ದು ಮುಂದಾಗಿ
ಹೋದವರು ಮುಪ್ಪಡಸಿ. ಅಥವಾ ರೋಗಿಗಳಾಗಿ.
ಸಾವು ಕೈಹಿಡಿವ ಸಖ ಎನಿಸುವುದು ಆಗಾಗ.
ಸುಳಿವಿಲ್ಲ ಮಾರನದು. ಇದ್ದಾನೊ ಇಲ್ಲವೊ!
ಗೌತಮಿಯು ಹೋದಳು. ಹಾಗೇ ಯಶೋಧರೆ!
ಕಾಶ್ಯಪ, ಮೊಗ್ಗಲಾಯನ ಸಾರಿಪುತ್ರರೂ
ಕರೆ ಬಂದ ಹೊತ್ತು ಕರೆಕರೆಯಿರದೆ ಎಲ್ಲರೂ.

೫೬
ಸೂರ್ಯ ಮೂಡುತ್ತಾನೆ. ಮತ್ತೆ ಮುಳುಗುತ್ತಾನೆ
ಬುದ್ಧನಿಗೆ ಶರಣೆಂದು ನೆರಳ ಕಂಬಳಿ ಹಾಸಿ
ಒಂದು ಕ್ಷಣ ನಿಂತು ನೋಡುವನು ಮುಸ್ಸಂಜೆಯಲಿ.
ಜೇತವನದ ವಿಹಾರದುಪ್ಪರಿಗೆಯಲಿ ಕೂತು
ಜಪಮಣಿಯನೆಣಿಸುತ್ತ ಬುದ್ಧ ಬೀಳ್ಕೊಳ್ಳುವನು
ಸೂರ್ಯನನು. ಪಡುವಲಾಕಾಶದಲಿ ಕಾಷಾಯ
ಹೊದ್ದ ಬೆಳ್ಮುಗಿಲುಗಳು ತೇಲುತಿವೆ ಹಗುರಾಗಿ
ಸಂಜೆ ಸ್ನಾನದ ಸಮಯ ಎನ್ನುವನು ಆನಂದ
ಎಡಗಿವಿಯ ಬಳಿ. ಬುದ್ಧ ನೋಡುವನು ಒಲವಿಂದ.
ನೀನು ಮಾತಾಡು ಆನಂದ ಕೇಳುತ್ತೇನೆ ನಿನ್ನ ನುಡಿ!
ಎನ್ನುವನು ಸುಗತ ಅಕ್ಕರೆಯಿಂದವನ ಕೈಹಿಡಿದು.
ಮಂಡಿಯೂರುತ ಆನಂದ ಹೇಳುತ್ತಾನೆ: ಭಂತೆ
ನಿನ್ನೆದುರು ನಾನೇನು ನುಡಿದೇನು? ಕಡಲೆದುರು
ನಿಂತ ಬೊಗಸೆಯ ಚಿಪ್ಪು. ‘ಚಿಪ್ಪಲ್ಲೆ ಮುತ್ತುಂಟು!’

೫೭
ವಜ್ಜಿಗಳ ರಾಜ್ಯಕ್ಕೆ ವೈಶಾಲಿಯೇ ಕೇಂದ್ರ.
ಅದೆ ರಾಜಧಾನಿ. ಲಿಚ್ಛವಿಗಳದು ಆಡಳಿತ.
ಬರಬಾರದಂಥ ಕ್ಷಾಮವು ಬಂತು ರಾಜ್ಯಕ್ಕೆ.
ಬುದ್ಧ ಕಾಲಿಡಲು ಮಳೆಯಾಗುವುದು ಎನ್ನುವರು
ಮಂತ್ರಿಗಳು. ಲಿಚ್ಛವಿಗಳಾಗ ಬುದ್ಧನ ಕಂಡು
ಬೇಡಿದರು ದಯಮಾಡಿ ಬನ್ನಿ ನಗರಕ್ಕೆಂದು.
ಬುದ್ಧನೂ ಒಪ್ಪಿದನು. ಶುಭವಾಗಲೆನ್ನುತ್ತ
ರತನ ಸೂತ್ರವ ಪಠಿಸಿ, ಹರಸಿದನು ಒಲವಿಂದ.
ಯಾವ ಶುಭ ಗಳಿಗೆಯಲಿ ಕಾಲಿಟ್ಟನೋ ಬುದ್ಧ
ಮೋಡಗಟ್ಟಿತು ಇರುಳು. ಸುರಿದಿತ್ತು ಸಮೃದ್ಧ
ವೃಷ್ಟಿ. ಲಿಚ್ಛವಿಗಳೊಪ್ಪಿದರವನ ಗುರುವೆಂದು
ಪುಷ್ಕರಣಿ ಕೆರೆಕಟ್ಟೆಗಳು ತುಂಬಿ ತುಳುಕಿದವು.
ರೋಗರುಜಿನವು ಹರಿದು, ಹಸಿರು ಕಣ್ತುಂಬಿತ್ತು.
ಬುದ್ಧ ಮೈತ್ರಿಯು ನಗರವನ್ನು ಆವರಿಸಿತ್ತು.

೫೮
ವೈಶಾಲಿಯಲಿ ಬುದ್ಧ ಉಳಿದದ್ದು ಹೊರವಲಯ-
ದಲ್ಲಿದ್ದ ಆಮ್ರವನದಲ್ಲಿ. ಆ ವನದೊಡತಿ
ಆಮ್ರಪಾಲೀ ಎಂಬ ರಾಜನರ್ತಕಿ. ಅವಳ
ಕಲೆಗೆ ಚೆಲ್ವಿಕೆಗೆ ಮರುಳಾಗದವರೇ ಇಲ್ಲ.
ಸರದಿ ಕಾಯುತ್ತಾರೆ ಹಣವುಳ್ಳ ಸಿರಿವಂತ
ಮಂದಿ ಆಕೆಯ ಮನೆಯ ಮುಂದೆ ಲಜ್ಜೆಯ ತೊರೆದು.
ಲಕ್ಷ್ಮಿ ಕಾಲ್ಮುರಿದು ಬಿದ್ದಿದ್ದಾಳೆ ಮನೆಯಲ್ಲಿ.
ಆದರೇಕೋ ಒಂದು ಬೇಸರವು ಕಾಡುತಿದೆ
ಇಷ್ಟೆ ಬದುಕಿನ ಗುರಿ, ಒಡಲೊಡ್ಡಿ ಹಣಗಳಿಕೆ?
ನಿತ್ಯವೂ ಬಂದು ಮುಖಮುಸುಕಲ್ಲಿ ದೂರದಲೆ
ನಿಂತು ಕೇಳುತ್ತಾಳೆ ಗುರುವಿನಮೃತ ವಾಣಿ.
ಇರುಳ ಚೆಲುವೆಗೆ ತೆಗೆದ ನೇರ ಬೈತಲೆಯಂತೆ
ಬುದ್ಧ ನುಡಿ. ನೆಮ್ಮದಿಯ ಸಂಚಾರ ಮನದೊಳಗೆ.

೫೯
ಕೊನೆಯ ದಿನ ಬುದ್ಧ ಚರಣಕ್ಕಾಕೆ ಮಣಿಯುವಳು
ನಾಳೆ ಬರಲಾದೀತೆ ಭಿಕ್ಷಕ್ಕೆ ಭಗವಂತ?
ಯಾಕೆ ಆಗದು? ಬರುವೆನು ಭಿಕ್ಕುಗಣದೊಡನೆ.
ಬೆರಗು ಪಡುವನು ಆನಂದ, ಭಂತೇ ಅವಳು
ಒಡಲು ಮಾರುವ ಹೆಣ್ಣು. ನನಗವಳು ಹೆಣ್ಣಲ್ಲ
ಒಂದು ದುಃಖಿತ ಜೀವ. ಸ್ವಲ್ಪ ಸಮಯದ ಬಳಿಕ
ಲಿಚ್ಛವಿಯ ದೊರೆ ಮತ್ತು ಪರಿವಾರ ಆಗಮಿಸಿ
ನಾಳೆ ಭಿಕ್ಷೆಗೆ ಬರುವ ಕೃಪೆಮಾಡು ಎನ್ನುವರು.
ಈಗಷ್ಟೆ ಆಮ್ರಪಾಲಿಯ ಭಿಕ್ಷೆಗೆ ನಾನು ಒಪ್ಪಿರುವೆ.
ಲಿಚ್ಛವಿಯ ದೊರೆ ಆಮ್ರಪಾಲಿಯನು ಕಾಣುವನು.
ನಾಳೆ ಭಿಕ್ಷೆಗೆ ಬರಲಿ ಬುದ್ಧಗುರು ನಮ್ಮಲ್ಲಿ.
ನೀನು ಒಪ್ಪಿಸು ಅವನ. ಎಷ್ಟು ಬೇಕೋ ಕೇಳು.
ಎನ್ನುವಳು: ‘ಗುರುವಿನಾಗಮನಕಿಂತಲು ಹೆಚ್ಚೆ
ನೀನು ನೀಡುವ ಹೊನ್ನು?’. ಲಿಚ್ಛವಿಯ ದೊರೆ ಪೆಚ್ಚು.

೬೦
ಉಳಿದೆಲ್ಲ ಭಿಕ್ಕುಗಳ ಸುತ್ತುಮುತ್ತಲ ಆಪ್ತ-
ಬಂಧುಗಳ ಕಡೆ ಕಳಿಸಿ, ಆನಂದನೊಡನೆ ಅಮಿ-
ತಾಭ ಉಳಿದನು ವೇಲುಗ್ರಾಮದಲಿ. ಅಲ್ಲಿಯೇ
ಕಳೆಯೆ ವರ್ಷಾವಾಸ. ಮೂರು ತಿಂಗಳ ಅವಧಿ.
ಆ ಅವಧಿಯಲ್ಲೇನೆ ಬುದ್ಧ ಮೊದಲನೆ ಸಾರಿ
ದುಸ್ಸಹಾ ಅನ್ನಿಸುವ ಉದರಶೂಲೆಯ ಬಾಧೆ
ಗೊಳಗಾದ. ಶಿಷ್ಯರಿಗೆ ಹೇಳದೆ ವಿದಾಯವನು
ನಿಬ್ಬಾಣಗೊಳ್ಳೆನು ಎಂಬ ದೃಢ ಸಂಕಲ್ಪ
ತಳೆದು ದುರ್ಭರ ನೋವ ಹಲ್ಕಚ್ಚಿ ಸಹಿಸಿದನು.
ಮಳೆಗಾಲ ಕಳೆದು ಬಂದರು ಎಲ್ಲ ಭಿಕ್ಕುಗಳು.
ಅವರೊಡನೆ ಅಮಿತಾಭ ಬಂಡ ಗ್ರಾಮಕೆ ಹೊರಟ.
ಆಗ ಏಕೋ ಒಮ್ಮೆ ತಿರುಗಿ ನೋಡಿದ ತನಗೆ
ತುಂಬ ಪ್ರಿಯವಾದ ಆ ವೈಶಾಲಿ ನಗರವನು.
ನೋಡುತ್ತ ಭಿಕ್ಕು ಆನಂದನಿಗೆ ನುಡಿಯುವನು:

೬೧
‘ಇದು ತಥಾಗತಗೆ ವೈಶಾಲಿಯಂತಿಮ ನೋಟ!’
ಎನ್ನುತ್ತ ಮತ್ತೆ ತಿರುಗದೆ ಮುಂದೆ ನಡೆಯುವನು.
ಹತ್ತಿಗ್ರಾಮವ ದಾಟಿ, ಜಂಬ, ಭೋಗದ ಮಾರ್ಗ
ಹಿಡಿದು ಪಾವದ ಕಡೆಗೆ ನಡೆಯುವನು, ಭಿಕ್ಕುಗಳು
ಹಿಂಬಾಲಿಸುವರು ವೃದ್ಧ ಗುರುವನ್ನ. ಪಾವದಲಿ
ಊರ ಹೊರಗೇ ಒಂದು ಆಮ್ರವನ. ಕಮ್ಮಾರ
ಕುಂದನಿಗೆ ಸೇರಿದ್ದು. ಅಲ್ಲೆ ಉಳಿಯಿತು ಭಿಕ್ಷು
ಸಮುದಾಯ ಇರುಳಲ್ಲಿ. ಬುದ್ಧ ಗುರು ಬಂದಿರುವ
ಸುದ್ದಿ ತಿಳಿದೊಡನೆಯೇ ಓಡಿಬಂದನು ಕುಂದ.
ನಾಳೆ ನಮ್ಮಲ್ಲಿಯೇ ಬರಬೇಕು ಭಿಕ್ಷೆಗೆ
ಎಂದು ಬೇಡುತ್ತಾನೆ ಭಗವಂತನನು ಕುಂದ.
ಹಾಗೆ ಆಗಲಿ ಎಂದು ಬುದ್ಧನೂ ಒಪ್ಪುವನು.
ಅಂದಿನ ವಿಶೇಷ ಸೂಕರಮದ್ದವಾ ಎಂಬ
ಭಕ್ಷ್ಯ. ಕೂತರು ಎಲ್ಲ ಕಾಯುತ್ತ ಬಡಿಸೋದ.

೬೨
ಕುಂದ! ಮದ್ದವವನ್ನು ನನಗೆ ಮಾತ್ರ ಬಡಿಸು.
ಭಿಕ್ಕು ಸಮುದಾಯಕ್ಕೆ ಉಳಿದ ಖಾದ್ಯವ ಬಡಿಸು.
ನಾನು ತಿನ್ನದೆ ಉಳಿದ ಮದ್ದವವ ಮಣ್ಣಲ್ಲಿ
ಹೂತುಬಿಡು-ಎನ್ನುವನು ಬುದ್ಧ! ಅದರಂತೆಯೇ
ಮಾಡುವನು, ಮೀರಲಾಗದು ಬುದ್ಧ ನುಡಿಯನ್ನು.
ಮನೆಮಂದಿಯೆಲ್ಲ ಉಂಡಾಗಿ , ನೆರೆದರು ಎಲ್ಲ,
ಮುಂದಿನಂಗಳದಲ್ಲಿ. ಆರ್ಯ ಸತ್ಯಗಳನ್ನು
ಅಮಿತಾಭ ವಿಸ್ತರಿಸಿ ಹೇಳುವನು, ಒಂದಲ್ಲ,
ಎರಡಲ್ಲ, ಮೂರುಸಲ ಹೇಳುವನು. ಸಂದೇಹ
ವಿದ್ದರೀಗಲೆ ಕೇಳಿ ಎನ್ನುವನು! ಅರ್ಥವಾ
ಯಿತು ಹೇಳುವರು ಮನೆಯವರು. ಬುದ್ಧನ ಧ್ಯಾನ
ವಿಶ್ರಾಂತಿಗಳ ಸಮಯ. ಸುಗತನೊಂದಿಗೆ ಆಮ್ರ-
ವನದ ತನಕಾ ಬಂದು, ಅಭಿವಂದನೆಯ ಸಲಿಸಿ
ಹಿಂದಿರುಗುವನು ಕುಂದ, ಸಂತೃಪ್ತ ಭಾವದಲಿ.

೬೩
ಥಟ್ಟನೆಚ್ಚರವಾಯ್ತು ನಟ್ಟಿರುಳು. ಅತಿಯಾದ
ಹೊಟ್ಟೆ ಮುರಿತದ ಬಾಧೆ; ಝಾಡಿಸುತ್ತಿದೆ ಉದರ.
ವೇಲುಗ್ರಾಮದಲಿ ಆದಂತೆ. ದುಸ್ಸಹ ಬಾಧೆ.
ಬತ್ತಿಯೇರಿಸಿ ಹಾಗೆ ಧ್ಯಾನಿಸುತ ಮಲಗುವನು.
ಬೇಡ ಆನಂದನನು ಎಚ್ಚರಿಸುವುದು ಈಗ.
ಮುಂಜಾನೆ ನಸುಕಲ್ಲೆ ಹೊರಡಬೇಕಿದೆ ಕುಶೀ-
ನಗರಕ್ಕೆ. ಕಾಯುತಿರುವರು ಅಲ್ಲಿ ಮಲ್ಲರು.
ಸೂಕರದ ಮದ್ದವವು ಅರಗಲಿಲ್ಲವೊ ಹೇಗೊ!
ಚಾಪೆಯಲಿ ಮೈಚಾಚಲಾಗದಿರುವಾಗವನು
ನಿಲ್ಲುವನು, ನಡೆಯುವನು. ಉಸಿರೊತ್ತಿ ಬರುತ ಇದೆ.
ನೀರು ಕುಡಿಯುವುದಕ್ಕು ಉಬ್ಬಳಿಕೆ. ಜಪಮಾಲೆ
ಎಣಿಸುವನು. ಬಾಧೆ ತುಸು ಕಡಿಮೆಯಾಗುತ್ತ ಇದೆ.
ಯಾವ ಮಾಯದಲಿ ಕಣ್-ಹತ್ತಿತೋ ತಿಳಿಯದು!

ನಸುಕಲ್ಲೆ ಯಾವ ಕರೆಗೋ ತಾನು ಎದ್ದದ್ದು?

Courtesy :
Dr. H.S.Venkatesh Murthy.
To his beloved friend, H.R.L.Venkatesh, Mumbai,
24th, Thursday, June, 2021


 
 

Comments

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

99th Foundation day of Mysore association Mumbai-2024 !

ಬಿ. ಎಂ. ಶ್ರೀ. ಪ್ರತಿಷ್ಠಾನ, ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನಾ ಕೇಂದ್ರ. ನರಸಿಂಹರಾಜ ಕಾಲೋನಿ, ಬೆಂಗಳೂರು .